ರಾಣೇಬೆನ್ನೂರು: ಕೊರೊನಾ ನೆಪದಲ್ಲಿ ಆಸ್ಪತ್ರೆಗೆ ಕಳೆದ 6 ದಿನಗಳಿಂದ ಸಿಬ್ಬಂದಿ ಕೆಲಸಕ್ಕೆ ಬಾರದೆ ಮನೆಯಲ್ಲಿದ್ದೇ ಸಂಬಳ ತೆಗೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಕೊರೊನಾ ನೆಪ: ಕೆಲಸಕ್ಕೆ ಗೈರಾದ ರಾಣೆಬೆನ್ನೂರು ಹೆರಿಗೆ ಆಸ್ಪತ್ರೆ ಸಿಬ್ಬಂದಿ! ರಾಣೆಬೆನ್ನೂರು ನಗರದಲ್ಲಿರುವ ಸರ್ಕಾರಿ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿ ಕಳೆದ ಒಂದು ವಾರದಿಂದ ಕೆಲಸಕ್ಕೆ ಗೈರಾಗಿದ್ದಾರೆ ಎನ್ನಲಾಗಿದ್ದು, ಗರ್ಭಿಣಿಯರು ಮತ್ತು ಚಿಕ್ಕ ಮಕ್ಕಳು ಚಿಕಿತ್ಸೆಗಾಗಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಜು. 18ರಂದು ಆಸ್ಪತ್ರೆಯ ಮೂವರು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿತ್ತು. ಇದರಿಂದ ಆಸ್ಪತ್ರೆ ಸಿಬ್ಬಂದಿ ಒತ್ತಾಯದ ಮೇರೆಗೆ ಆಸ್ಪತ್ರೆಯನ್ನು ಸ್ಯಾನಿಟೈಸ್ ಮಾಡಿಸಿ 4 ದಿನಗಳ ಕಾಲ ಬಂದ್ ಮಾಡಲಾಗಿತ್ತು.
ಕೊರೊನಾ ಪಾಸಿಟಿವ್ ಬಂದ ಸಿಬ್ಬಂದಿ ಹೊರತುಪಡಿಸಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಸುಮಾರು 28 ಜನ ಸಿಬ್ಬಂದಿ ಆಸ್ಪತ್ರೆಯತ್ತ ಮುಖ ಮಾಡಿಲ್ಲವಂತೆ. ಕಾಟಾಚಾರಕ್ಕೆ ಒಬ್ಬರು ಸ್ಟಾಪ್ ನರ್ಸ್ ಮತ್ತು ಇಬ್ಬರು ಹೊರಗುತ್ತಿಗೆ ಸಿಬ್ಬಂದಿ ಮಾತ್ರ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತುರ್ತು ಚಿಕಿತ್ಸೆಗೆ ಆಗಮಿಸುವರನ್ನು ಪರೀಕ್ಷಿಸುವ ಬದಲು ವೈದ್ಯರು ಮನೆಯಲ್ಲಿ ರೆಸ್ಟ್ ತಗೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.
ಶಾಸಕರೇ ಇತ್ತ ನೋಡಿ: ಸಾರ್ವಜನಿಕ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಸಿಬ್ಬಂದಿಗೆ ಕೊರೊನಾ ಬಂದ ನಂತರ ಆಸ್ಪತ್ರೆಯನ್ನು ಸ್ವತಃ ಶಾಸಕರೇ ಮುಂದೆ ನಿಂತು ಸ್ಯಾನಿಟೈಸ್ ಮಾಡಿಸಿದ್ದಾರೆ. ಆದರೆ ಸಿಬ್ಬಂದಿ ಮಾತ್ರ ಆಸ್ಪತ್ರೆಗೆ ಬರುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ಮತ್ತು ಗರ್ಭಿಣಿಯರಿಗೆ ತೀವ್ರ ತೊಂದರೆಯಾಗುತ್ತಿದೆ. ಅಧಿಕಾರಿಗಳು ಮತ್ತು ಶಾಸಕರು ಇದರ ಬಗ್ಗೆ ಗಮನಹರಿಸಿ, ಕೆಲಸಕ್ಕೆ ಹಾಜರಾಗಲು ಸೂಚಿಸಬೇಕು ಎಂದು ಸ್ಥಳೀಯರಾದ ಮಂಜುನಾಥ ಹುಣಸಿಕಟ್ಟಿ ಆಗ್ರಹಿಸಿದ್ದಾರೆ.