ಹಾವೇರಿ:ಲಾಕ್ಡೌನ್ನಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಅದರಲ್ಲೂ ಬೀದಿಯಲ್ಲಿ ಭಿಕ್ಷಾಟನೆ ಮಾಡುವ ಮಂಗಳಮುಖಿಯರ ಸ್ಥಿತಿಯಂತೂ ಹೇಳತೀರದು. ಮಂಗಳಮುಖಿಯರ ಬದುಕು ಇದೀಗ ಮುರಾಬಟ್ಟೆಯಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮಗೆ ಯಾವುದೇ ರೀತಿಯ ಪ್ಯಾಕೇಜ್ ಘೋಷಣೆ ಮಾಡಿಲ್ಲವೆಂದು ಮಂಗಳಮುಖಿಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳಿಗೆ ಚುನಾವಣೆಯ ಸಮಯದಲ್ಲಿ ಮಾತ್ರ ನಮ್ಮ ನೆನಪಾಗುತ್ತೆ. ಈ ರೀತಿಯ ಸಂಕಷ್ಟದಲ್ಲಿ ನಮ್ಮ ನೆನಪಾಗುವುದಿಲ್ಲ ಎನ್ನುತ್ತಿದ್ದಾರೆ.
ಭಿಕ್ಷಾಟನೆ ಹಾಗೂ ಲೈಂಗಿಕ ಕಾರ್ಯಕರ್ತೆಯರಾಗಿ ದುಡಿದ ಹಣದಿಂದ ಜೀವನ ನಡೆಯುತ್ತಿತ್ತು. ಆದರೆ ಇದೀಗ ಕೊರೊನಾ ಬಂದ ನಂತರ ಎಲ್ಲವೂ ಬಂದ್ ಆಗಿದೆ. ಇದರಿಂದಾಗಿ ಆದಾಯವಿಲ್ಲದೇ ಮನೆ ಬಾಡಿಗೆ ಕಟ್ಟಲು ಸಹ ಹಣವಿಲ್ಲ. ಸಮುದಾಯದಲ್ಲಿ ಹೆಚ್ಐವಿ ಸೋಂಕಿತರಿದ್ದಾರೆ. ಅವರಿಗೆ ತಿಂಗಳಿನ ಔಷಧಿ ಸಹ ಸಿಗುತ್ತಿಲ್ಲ. ಹೀಗಾದರೆ ನಾವು ಹೇಗೆ ಬದುಕಬೇಕು ಎನ್ನುತ್ತಿದ್ದಾರೆ.
ಲಾಕ್ಡೌನ್ನಿಂದಾಗಿ ಸಂಕಷ್ಟ ಅನುಭವಿಸುತ್ತಿರುವ ಮಂಗಳಮುಖಿಯರು ಹಾವೇರಿ ಜಿಲ್ಲೆಯಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿಗಾಗಿ ಸಂಜೀವಿನಿ ಸಂಸ್ಥೆ ರಚನೆಯಾಗಿದೆ. ಇದರಲ್ಲಿ ಜಿಲ್ಲೆಯ ವಿವಿಧ ತರದ 850 ಲೈಂಗಿಕ ಅಲ್ಪಸಂಖ್ಯಾತರು ಸದಸ್ಯರಾಗಿದ್ದಾರೆ. ಆದರೆ ಕೊರೊನಾದಿಂದ ಈ ಮಂಗಳಮುಖಿಯರು ಸಂಕಷ್ಟದಲ್ಲಿ ಸಿಲುಕಿದ್ದರೂ ಯಾರೂ ನೆರವಿಗೆ ಬರುತ್ತಿಲ್ಲ. ಜಿಲ್ಲಾಡಳಿತ 13 ಜನರಿಗೆ ದಿನಸಿ ಕಿಟ್ ವಿತರಿಸಿದ್ದು ಬಿಟ್ಟರೆ ಸೌಜನ್ಯಕ್ಕಾದರೂ ಅವರನ್ನು ಮಾತನಾಡಿಸಿಲ್ಲ. ಈಗಲಾದರೂ ಅಧಿಕಾರಿಗಳು ಜನಪ್ರತಿನಿಧಿಗಳು ತಮ್ಮ ಕಡೆ ಗಮನ ನೀಡುವಂತೆ ಈ ಸಮುದಾಯ ಒತ್ತಾಯಿಸಿದೆ.