ಹಾವೇರಿ: ಜಿಲ್ಲೆಯಲ್ಲಿ ಮೊದಲ JN.1 ವೈರಸ್ ಪತ್ತೆಯಾಗಿದೆ. 59 ವರ್ಷದ ಮಹಿಳೆ ಜ್ವರ ಮತ್ತು ಕೆಮ್ಮಿನಿಂದ ಬಳಲುತ್ತಿದ್ದು ಕೊರೊನಾ ಇರುವುದು ದೃಢಪಟ್ಟಿದೆ. ಸದ್ಯ ಮಹಿಳೆ ಶಿವಮೊಗ್ಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿ ಐಸೋಲೇಷನ್‌ನಲ್ಲಿದ್ದಾರೆ. ಕೊರೊನಾ ಕೇಸ್ ಪ್ರಕರಣ ಇರುವುದನ್ನು ಹಾವೇರಿ ಜಿಲ್ಲಾ ಆರೋಗ್ಯಾಧಿಕಾರಿ ರಾಘವೇಂದ್ರಸ್ವಾಮಿ ಖಚಿತಪಡಿಸಿದ್ದಾರೆ. ಈಗಾಗಲೇ ಹಾವೇರಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಕೊರೊನಾ ನೂತನ ವೈರಸ್ ಕಾಣಿಸಿಕೊಂಡರೆ ತೆಗೆದುಕೊಳ್ಳಬೇಕಾದ ಎಲ್ಲ ಸಕಲ ಸಿದ್ಧತೆ ಮಾಡಿಕೊಂಡಿದೆ.
ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ ಸ್ಥಾಪನೆ ಮಾಡಲಾಗಿದೆ. 24 ಬೆಡ್ ಇರುವ ವಾರ್ಡ್ ತೆರೆಯಲಾಗಿದ್ದು, ಆಕ್ಸಿಜನ್ ಪ್ಲ್ಯಾಂಟ್, ಆಕ್ಸಿಜನ್ ಸಿಲಿಂಡರ್, 136 ಜಂಬೋ ಸಿಲಿಂಡರ್ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆ ಸೇರಿದಂತೆ 8 ತಾಲೂಕು ಆಸ್ಪತ್ರೆಗಳಲ್ಲಿ ವಾರ್ಡ್ ತೆರೆಯಲಾಗಿದೆ. ಐಸಿಯೂ ಎನ್ ಸಿಯೂ ಕೋವಿಡ್ ವಾರ್ಡ್ಗಳಲ್ಲಿ ಸರಿಯಾಗಿ ಅಕ್ಸಿಜನ್ ಸರಬರಾಜು ಆಗುತ್ತದೆಯೋ ಇಲ್ಲವೋ ಎಂದು ಪರೀಕ್ಷೆ ಕೂಡ ಮಾಡಲಾಗಿದೆ.
ಹಾಸನದಲ್ಲಿ ಮೊದಲ ಸಾವು:ಹಾಸನಜಿಲ್ಲೆಯಲ್ಲಿ ಕೊರೊನಾ ರೂಪಾಂತರಿ ತಳಿಗೆ ಡಿ.26ರಂದು ಮೊದಲ ಸಾವು ಸಂಭವಿಸಿತ್ತು. ಕೊರೊನಾ ಜೆಎನ್.1 ರೂಪಾಂತರಿ ತಳಿಗೆ ವಯೋವೃದ್ಧ ವ್ಯಕ್ತಿ ಸಾವನ್ನಪ್ಪಿದ್ದಾರೆ. ಚನ್ನರಾಯಪಟ್ಟಣ ಮೂಲದ ವ್ಯಕ್ತಿ ಮೃತಪಟ್ಟಿದ್ದು, ಮೃತರು ಈ ಮೊದಲೇ ಇತರ ರೋಗಗಳಿಂದ ಬಾಧಿತನಾಗಿದ್ದ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರು.