ಹಾವೇರಿ: ಸರ್ಕಾರಿ ಶಾಲೆ ಎಂದರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಸರ್ಕಾರಿ ಶಾಲಾ ಕಟ್ಟಡದಿಂದ ಹಿಡಿದು ಮೈದಾನದವರಿಗೆ ಇರುವ ಕೊರತೆಗಳನ್ನು ತೂರಿಸುವವರೇ ಹೆಚ್ಚು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಶಾಲೆಯೊಂದು ಹಾವೇರಿ ಜಿಲ್ಲೆ ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿಯಲ್ಲಿದೆ.
ಕಣವಿಸಿದ್ದಗೇರಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೆ 231 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಗೆ ಗ್ರಾಮಸ್ಥರು, ಹಳೇ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಗ್ರಾಮ ಪಂಚಾಯತ್ ಅಧಿಕಾರಿಗಳು ಸೇರಿ ಹೊಸ ಸ್ಪರ್ಷ ನೀಡಿದ್ದಾರೆ.
ಶಾಲೆಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ 9 ಲಕ್ಷ ರೂಪಾಯಿ ವೆಚ್ಚ ಮಾಡಲು ಗ್ರಾಮ ಪಂಚಾಯತ್ ಮುಂದಾಗಿದೆ. ಈಗಾಗಲೇ ಶಾಲಾ ಆವರಣದಲ್ಲಿ ವಿವಿಧ ಕ್ರೀಡೆಗಳ ಕ್ರೀಡಾಂಗಣ ನಿರ್ಮಿಸಲಾಗಿದೆ. ಟೆನಿಸ್, ಖೋಖೋ, ಕಬ್ಬಡ್ಡಿ, ವಾಲಿಬಾಲ್ ಮತ್ತು ಡಿಸ್ಕಸ್ ಥ್ರೋ ಸೇರಿದಂತೆ ವಿವಿಧ ಕ್ರೀಡಾಂಗಣಗಳನ್ನು ಮೈದಾನದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ.
ಕಣವಿಸಿದ್ದಗೇರಿ, ಮಳಗಿ ಮತ್ತು ಚಪ್ಪರದಹಳ್ಳಿ ಗ್ರಾಮ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಬಡ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಶಾಲೆಯಲ್ಲಿ ಪಾಠದ ಜೊತೆಗೆ ಆಟಗಳಗೂ ಒತ್ತು ಕೊಡಲಾಗಿದೆ. ಅದೆಷ್ಟೋ ಖಾಸಗಿ ಶಾಲೆಗಳಲ್ಲಿ ಸಹ ಇರದಂತಹ ಸುಸಜ್ಜಿತ ಕ್ರೀಡಾಂಗಣಗಳು ಈ ಶಾಲೆಯ ಮೈದಾನದಲ್ಲಿವೆ.