ಹಾವೇರಿ : ಜಿಲ್ಲೆಯ ಹೊರವಲಯದ ನಾಗೇಂದ್ರನಮಟ್ಟಿಯಲ್ಲಿರುವ ಅಲೆಮಾರಿ ಸುಡುಗಾಡು ಸಿದ್ದರ ಕನಸು ನನಸಾಗುತ್ತಿದೆ. ಸ್ವಂತ ಸೂರಿನ ಕನಸು ಕಂಡಿದ್ದ ಈ ಕುಟುಂಬಗಳಿಗೆ ಗೃಹ ಸಮುಚ್ಚಯಗಳು ಸಿದ್ಧವಾಗುತ್ತಿವೆ. ಹಾವೇರಿ ನಗರಸಭೆಯು ಸುಡುಗಾಡು ಸಿದ್ದರು ಸೇರಿದಂತೆ ನಿರ್ಗತಿಕರಿಗೆ ನಾಗೇಂದ್ರನ ಮಟ್ಟಿಯ ಶಾಂತಿನಗರದಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಲಾಗುತ್ತಿದೆ.
ಹೌದು, ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಯಲ್ಲಿ 200 ಫಲಾನುಭವಿಗಳಿಗೆ ಮನೆ ಕಟ್ಟಿಸಿ ಕೊಡಲು ನಗರಸಭೆ ಗುತ್ತಿಗೆ ನೀಡಿದೆ. ಈ ಗುತ್ತಿಗೆ ಪಡೆದಿರುವ ಕಂಪನಿಯು ಕಟ್ಟಡ ನಿರ್ಮಿಸುತ್ತಿದೆ. ಈಗಾಗಲೇ ಕಾಮಗಾರಿ ಆರಂಭವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಮನೆಗಳಲ್ಲಿ ವಾಸ ಮಾಡುವ ಆಸೆಯನ್ನು ಸುಡುಗಾಡು ಸಿದ್ದರು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಮಳೆಗೆ ನಲುಗಿದ ಅಲೆಮಾರಿ ಜನಾಂಗ... ಸುಡುಗಾಡು ಸಿದ್ದರ ಗೋಳು ಕೇಳೋರು ಯಾರು ?
ಸುಡುಗಾಡು ಸಿದ್ದರು ಸುಮಾರು 40 ವರ್ಷಗಳಿಂದ ಹಾವೇರಿ ನಗರದಲ್ಲಿದ್ದಾರೆ. ದಾನೇಶ್ವರಿ ನಗರ ಸೇರಿದಂತೆ ವಿವಿಧ ಕಡೆ ಮನೆ ಮಾಡಿಕೊಂಡಿರುವ ಈ ಕುಟುಂಬಗಳು 2019 ರ ನೆರೆಗೆ ನಲುಗಿದ್ದವು. ಅಂದು ಈ ಕುಟುಂಬಗಳಿಗೆ ನಾಗೇಂದ್ರನಮಟ್ಟಿ ಸರ್ಕಾರಿ ಶಾಲೆಯಲ್ಲಿ ಗಂಜಿ ಕೇಂದ್ರ ತೆಗೆದು ರಕ್ಷಣೆ ನೀಡಲಾಗಿತ್ತು. ಜೊತೆಗೆ ಅಲೆಮಾರಿಗಳಾಗಿರುವ ಸುಡುಗಾಡು ಸಿದ್ದರ 26 ಕುಟುಂಬಗಳಿಗೆ ಅಂದು ಅಧಿಕಾರಿಗಳು, ಜನಪ್ರತಿನಿಧಿಗಳು ಶಾಶ್ವತ ಸೂರು ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಶಾಂತಿನಗರದಲ್ಲಿರುವ 7 ಎಕರೆ ಜಮೀನಿನಲ್ಲಿ ತಾತ್ಕಾಲಿಕವಾಗಿ ತಗಡಿನ ಶೆಡ್ ನಿರ್ಮಿಸಲಾಗಿತ್ತು.