ಕರ್ನಾಟಕ

karnataka

ಹಾವೇರಿಯ ಕಾಂಗ್ರೆಸ್​ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ಲಾಬಿ

By

Published : May 21, 2023, 7:48 PM IST

ಸಚಿವ ಸಂಪುಟದ ವಿಸ್ತರಣೆ ವೇಳೆ ನನಗೂ ಅವಕಾಶ ಸಿಗಬಹುದು ಎಂದು ಮಾಜಿ ಸಚಿವ ಬಸವರಾಜ್ ಶಿವಣ್ಣನವರ್ ತಿಳಿಸಿದ್ದಾರೆ.

ಮಾಜಿ ಸಚಿವ ಬಸವರಾಜ್ ಶಿವಣ್ಣ ಹಾಗೂ ಶಾಸಕ ರುದ್ರಪ್ಪ ಲಮಾಣಿ
ಮಾಜಿ ಸಚಿವ ಬಸವರಾಜ್ ಶಿವಣ್ಣ ಹಾಗೂ ಶಾಸಕ ರುದ್ರಪ್ಪ ಲಮಾಣಿ

ಮಾಜಿ ಸಚಿವ ಬಸವರಾಜ್ ಶಿವಣ್ಣನವರ್

ಹಾವೇರಿ :ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು 8 ಕ್ಯಾಬಿನೆಟ್ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಹಾವೇರಿ ಜಿಲ್ಲೆಯ ಕಾಂಗ್ರೆಸ್ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಶುರುವಾಗಿದೆ.

ಜಿಲ್ಲೆಯ ಬ್ಯಾಡಗಿ ಕ್ಷೇತ್ರದಿಂದ ಆಯ್ಕೆಯಾದ ಬಸವರಾಜ್ ಶಿವಣ್ಣನವರ್ ಮತ್ತು ಹಾವೇರಿ ಕ್ಷೇತ್ರದಿಂದ ಆಯ್ಕೆಯಾದ ರುದ್ರಪ್ಪ ಲಮಾಣಿ ಸಚಿವ ಸ್ಥಾನದ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಬಸವರಾಜ್ ಶಿವಣ್ಣನವರ್ ಈ ಹಿಂದೆ ಜೆ ಹೆಚ್ ಪಟೇಲ್ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ರುದ್ರಪ್ಪ ಲಮಾಣಿ ಸಹ ಸಿಎಂ ಸಿದ್ದರಾಮಯ್ಯ ಸರ್ಕಾರದಲ್ಲಿ ಈ ಹಿಂದೆ ಜವಳಿ ಮತ್ತು ಮುಜರಾಯಿ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಈ ಇಬ್ಬರು ನಾಯಕರು ಇದೀಗ ಸಚಿವ ಸ್ಥಾನ ದೊರೆಯುವ ವಿಶ್ವಾಸದಲ್ಲಿದ್ದಾರೆ.

ಈ ಕುರಿತಂತೆ ಮಾತನಾಡಿದ ಬ್ಯಾಡಗಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಬಸವರಾಜ್ ಶಿವಣ್ಣನವರ್, ಪ್ರಾಂತ್ಯ ಮತ್ತು ಜಾತಿವಾರು ನೀಡಬೇಕಾಗಿದ್ದರಿಂದ ಸಚಿವ ಸಂಪುಟದ ವಿಸ್ತರಣೆ ಮುಂದಕ್ಕೆ ಹೋಗಿದೆ. ಹಾವೇರಿ ಜಿಲ್ಲೆಯ ಐದು ಕಾಂಗ್ರೆಸ್ ಶಾಸಕರಲ್ಲಿ ನಾನು ಸಹ ಹಿರಿಯ ಶಾಸಕ. ನಾನು ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನನಗೂ ಸಹ ಸಚಿವ ಸ್ಥಾನ ನೀಡುವಂತೆ ಸಿಎಂ ಸಿದ್ದರಾಮಯ್ಯ ಮತ್ತು ಇತರ ಮುಖಂಡರಲ್ಲಿ ಮನವಿ ಮಾಡಿದ್ದೇನೆ. ಅವರು ಸಹ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿದ್ದಾರೆ ಎಂದರು.

ನನಗೂ ಅವಕಾಶ ಸಿಗಬಹುದು :ನನ್ನ ಪ್ರಯತ್ನ ನಾನು ಮಾಡಿದ್ದು ಜೊತೆಗೆ ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಸಹ ಪ್ರಯತ್ನಿಸಿದ್ದಾರೆ. ಇಬ್ಬರಲ್ಲಿ ಯಾರಿಗೆ ನೀಡಿದರೂ ಇಬ್ಬರು ಹಾವೇರಿ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು. ಶನಿವಾರ ನಡೆದ ಪ್ರಮಾಣವಚನ ಸ್ವೀಕಾರದಲ್ಲಿ ನಮಗೂ ಸಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲು ಕರೆ ಬರುತ್ತೆ ಎಂಬ ಆಸೆ ಇತ್ತು. ಆದರೆ ಅಲ್ಲಿ ಏನೇನೂ ಚರ್ಚೆಯಾಗಿದೆ. ಅದರ ಮೇಲೆ ಸಚಿವ ಸಂಪುಟ ರಚನೆ ಮಾಡಿದ್ದಾರೆ. ಸಚಿವ ಸಂಪುಟದ ವಿಸ್ತರಣೆ ವೇಳೆ ನನಗೂ ಅವಕಾಶ ಸಿಗಬಹುದು ಎಂದು ಬಸವರಾಜ್ ಶಿವಣ್ಣನವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಹಾವೇರಿಯಲ್ಲಿ ಮಾತನಾಡಿದ ಮಾಜಿ ಸಚಿವ ರುದ್ರಪ್ಪ ಲಮಾಣಿ, ತಮಗೆ ಸಚಿವ ಸ್ಥಾನ ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಾತಿವಾರು ಜಿಲ್ಲಾವಾರು ಲೆಕ್ಕಾಚಾರ ಮಾಡಿದ್ದಾರೆ. ನಾನು ಲಂಬಾಣಿ ಸಮಾಜದಿಂದ ಆಯ್ಕೆಯಾದ ಏಕೈಕ ಶಾಸಕ. ಹೀಗಾಗಿ ನನಗೆ ಜಾತಿ ಕೋಟಾದಲ್ಲಿ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ರುದ್ರಪ್ಪ ಲಮಾಣಿ ತಿಳಿಸಿದ್ದಾರೆ. ಹೈಕಮಾಂಡ್​ ನಮ್ಮ ನಿರೀಕ್ಷೆಯಂತೆ ಸಚಿವರಾಗಿ ಆಯ್ಕೆ ಮಾಡಲಿದೆ ಎಂದು ರುದ್ರಪ್ಪ ಲಮಾಣಿ ತಿಳಿಸಿದರು.

ಶಾಸಕ ರುದ್ರಪ್ಪ ಲಮಾಣಿ

ನನಗೂ ಸಹ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ : ಸಚಿವ ಸ್ಥಾನದ ಆಕಾಂಕ್ಷಿಗಳು ಅವರ ಹಿರಿತನ, ಜಾತಿ, ಜಿಲ್ಲೆ ಸೇರಿದಂತೆ ವಿವಿಧ ಅಂಶಗಳನ್ನು ಪರಿಗಣನೆ ಮಾಡುತ್ತಾರೆ. ನನಗೂ ಸಹ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ. ಭರವಸೆ ಇದೆ ಎಂದು ರುದ್ರಪ್ಪ ಲಮಾಣಿ ತಿಳಿಸಿದರು. ಎಂಟು ಹತ್ತು ಬಾರಿ ಶಾಸಕರಾಗಿ ಆಯ್ಕೆಯಾದ ಹಿರಿಯ ನಾಯಕರಿದ್ದಾರೆ. ಅವರ ಜೊತೆ ನಾವು ಸಚಿವರಾಗಿ ಕಾರ್ಯನಿರ್ವಹಿಸಲಿದ್ದೇವೆ ಎಂದರು.

ಕಾಂಗ್ರೆಸ್ ಚುನಾವಣೆಯಲ್ಲಿ ನೀಡಿದ ಗ್ಯಾರಂಟಿ ಕಾರ್ಡ್​ಗಳ ಬಗ್ಗೆ ಮಾತನಾಡಿದ ರುದ್ರಪ್ಪ, ಚುನಾವಣೆ ಪೂರ್ವ ಹೇಳುವುದು ಬೇರೆ. ನಂತರ ಅವುಗಳ ಜಾರಿಗೆ ಮಾನದಂಡ ಅನುಸರಿಸಬೇಕಾಗುತ್ತದೆ. ಕೆಲ ಗ್ಯಾರಂಟಿಗಳ ಮಾರ್ಗಸೂಚಿಗಳ ಸಿದ್ಧತೆಯ ಕಾರಣದಿಂದ ವಿಳಂಬವಾಗುತ್ತಿದೆ. ಆದಷ್ಟು ಬೇಗ ಎಲ್ಲ ಗ್ಯಾರಂಟಿಗಳನ್ನ ಮಾನದಂಡಗಳ ಅನ್ವಯ ಜಾರಿಗೆ ತರುತ್ತೇವೆ ಎಂದು ರುದ್ರಪ್ಪ ಲಮಾಣಿ ಹೇಳಿದರು.

ಇದನ್ನೂ ಓದಿ :ಕಾಂಗ್ರೆಸ್​ನಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳಿಂದ ಹೆಚ್ಚುತ್ತಿದೆ ಒತ್ತಡ; ದೊಡ್ಡ ಮಟ್ಟದ ಲಾಬಿ ಆರಂಭ

ABOUT THE AUTHOR

...view details