ಹಾವೇರಿ: ಹಾನಗಲ್ ಮತ್ತು ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಮಾಜಿ ಸಿಎಂ ಯಡಿಯೂರಪ್ಪ ನಾಯಕತ್ವದಲ್ಲಿ, ಪ್ರಧಾನಿ ಮೋದಿಯವರ ಗಾಳಿಯಲ್ಲೂ ಹಿಂದೆ ನಾವು ಕಡಿಮೆ ಅಂತರದಲ್ಲಿ ಸೋತಿದ್ದೇವೆ. ಈಗ ಆ ವಾತಾವರಣವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಮೊದಲಿನಂತ ವಾತಾವರಣ ಬಿಜೆಪಿಗೆ ಇಲ್ಲ; ಉಪ ಕದನದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ತಾರೆಂದ ಜಾರಕಿಹೊಳಿ ಹಾನಗಲ್ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಲು ಬಂದಿದ್ದ ಅವರು, ಮೂರು ವರ್ಷಗಳ ನಂತರ ವಾತಾವರಣ ಬಹಳಷ್ಟು ಬದಲಾವಣೆ ಆಗಿದೆ. ಕಾಂಗ್ರೆಸ್ ಗೆಲ್ಲಲಿಕ್ಕೆ ನಮ್ಮ ಪಕ್ಷದ ಎಲ್ಲ ನಾಯಕರು ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ಇನ್ನೂ ಬಹಳಷ್ಟು ಸಮಯವಿದೆ. ಹೀಗಾಗಿ ಎಲ್ಲ ಹಳ್ಳಿಗಳನ್ನು ಸುತ್ತಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಮತ ಕೇಳುತ್ತೇವೆ. ಯಡಿಯೂರಪ್ಪ ಇದ್ದಾಗಲೇ ಹಾನಗಲ್ ನಲ್ಲಿ ಐದು ಸಾವಿರ ಮತಗಳ ಅಂತರದಲ್ಲಿ ಸೋತಿದ್ದೇವೆ. ಈಗ ಬಹಳಷ್ಟು ಅವರ ವಿರೋಧಿ ಅಲೆ ಇದೆ. ಅದು ಖಂಡಿತವಾಗಿ ನಮಗೆ ವರದಾನ ಆಗೇ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಡ್ಯಾಮೇಜ್ ಕೆಲಸ:
ಇದೇ ವೇಳೆ ಜೆಡಿಎಸ್ ನಿಂದ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ಸಂಬಂಧ ಮಾತನಾಡಿದ ಅವರು, ಜೆಡಿಎಸ್ ಕಾಂಗ್ರೆಸ್‌ಗೆ ಡ್ಯಾಮೇಜ್ಗೆ ಪ್ರಯತ್ನ ಮಾಡುತ್ತದೆ. ಹಿಂದೆ ಬಸವಕಲ್ಯಾಣದಲ್ಲೂ ಅದನ್ನ ಮಾಡಿ ಯಶಸ್ವಿ ಆಗಿದ್ದಾರೆ. ಅಲ್ಪಸಂಖ್ಯಾತ ಮತದಾರರು ಜಾಗೃತರಿದ್ದಾರೆ. ಬಹುಶಃ ಆ ಕಡೆಗೆ ಹೋಗಲಿಕ್ಕಿಲ್ಲ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಕಡೆಗೆ ಮತದಾನ ಮಾಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.