ಹಾವೇರಿ :ವಿದ್ಯಾರ್ಥಿಗಳ ನಡುವೆ ಹಿಜಾಬ್ ಮತ್ತು ಕೇಸರಿ ಶಾಲು ಧರಿಸುವ ವಿವಾದ ಭುಗಿಲೆದ್ದಿರುವುದು ದುರ್ದೈವದ ಸಂಗತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಬೇಸರ ವ್ಯಕ್ತಪಡಿಸಿದ್ದಾರೆ.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣ್ಣ-ತಮ್ಮಂದಿರಂತೆ ಇದ್ದ ವಿದ್ಯಾರ್ಥಿಗಳಲ್ಲಿ ವಿಷಬೀಜ ಬಿತ್ತುತ್ತಿರುವ ಘಟನೆಗಳಿಂದ ನಾವೆಲ್ಲಾ ನೊಂದಿದ್ದೇವೆ. ಈ ರೀತಿಯ ಘಟನೆಗಳು ಆಗಬಾರದು. ಇದಕ್ಕೆ ನೇರವಾಗಿ ಸರ್ಕಾರವೇ ಹೊಣೆ ಎಂದು ಸಲೀಂ ಅಹ್ಮದ್ ಆರೋಪಿಸಿದ್ದಾರೆ.
ಹಿಜಾಬ್- ಕೇಸರಿ ವಿವಾದದ ಕುರಿತಂತೆ ಕಾಂಗ್ರೆಸ್ ಎಂಎಲ್‌ಸಿ ಸಲೀಂ ಅಹ್ಮದ್ ಮಾತನಾಡಿರುವುದು.. ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡುವದಿಲ್ಲ. ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಕೆಲವು ಶಕ್ತಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ.
ಇಂತಹ ಶಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕು. ರಾಜ್ಯದಲ್ಲಿ ಶಾಂತಿ ನೆಲೆಸಬೇಕು. ನಾವೆಲ್ಲ ಅಣ್ಣ-ತಮ್ಮಂದಿರಂತೆ ಜೀವನ ಮಾಡುವ ರೀತಿಯಲ್ಲಿ ಪರಿಸ್ಥಿತಿ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದರು.
ಸಿ ಎಂ ಇಬ್ರಾಹಿಂ ಪಕ್ಷ ಬಿಡಲ್ಲ:ಸಿಎಂ ಇಬ್ರಾಹಿಂ ಪಕ್ಷ ತೊರೆಯುತ್ತಿರುವ ಬಗ್ಗೆ ಮಾತನಾಡಿದ ಅವರು, ಇಬ್ರಾಹಿಂ ಅವರು 2008ರಿಂದ ಕಾಂಗ್ರೆಸ್ನಲ್ಲಿದ್ದಾರೆ. ಅವರು ಕೇಳಿದ ಎಲ್ಲ ಸ್ಥಾನಗಳನ್ನು ಕಾಂಗ್ರೆಸ್ ನೀಡಿದೆ. ಆದರೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನವನ್ನ ಅವರು ಕೇಳಿದ್ದರು. ಈಗ ಆ ಸ್ಥಾನಕ್ಕೆ ಬಿ ಕೆ ಹರಿಪ್ರಸಾದ್ ಅವರನ್ನ ಪಕ್ಷ ನೇಮಿಸಿದೆ. ಆದರೂ ಇಬ್ರಾಹಿಂ ಅವರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ಸಲೀಂ ಅಹ್ಮದ್ ತಿಳಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಕೆಂಪುಕೋಟೆಯಲ್ಲಿ ಭಗವಾ ಧ್ವಜ ಹಾರಲಿದೆ ಎಂಬ ಹೇಳಿಕೆಯನ್ನು ಖಂಡಿಸಿದ ಸಲೀಂ ಅಹ್ಮದ್, ಸಚಿವರಾಗಿ ಕೆ.ಎಸ್.ಈಶ್ವರಪ್ಪ ಈ ತರಹದ ಹೇಳಿಕೆ ನೀಡಬಾರದಿತ್ತು. ಈ ಕೂಡಲೇ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಈಶ್ವರಪ್ಪರ ರಾಜೀನಾಮೆ ಪಡೆಯಬೇಕು. ಇಂತಹ ಹೇಳಿಕೆಗಳಿಂದ ದೇಶದಲ್ಲಿ ಕೋಮು ಸೌಹಾರ್ದ ಹದಗೆಡುತ್ತದೆ ಎಂದು ಹೇಳಿದರು.
ಓದಿ:ಬೆಳಗಾವಿಯಲ್ಲಿ ಮಕ್ಕಳ ಜೊತೆಗೆ ಮಹಿಳೆ ಆತ್ಮಹತ್ಯೆ: ಶಾಲಾ ಸಮವಸ್ತ್ರದಲ್ಲೇ ಬಾಲಕನ ಶವಪತ್ತೆ