ಹಾವೇರಿ : ರಾಜ್ಯ ಕಾಂಗ್ರೆಸ್‌ನಲ್ಲಿ ಮೂರ್ನಾಲ್ಕು ಗುಂಪುಗಳಿವೆ. ಈ ಗುಂಪುಗಳ ಬಗ್ಗೆ ಮತದಾರರಿಗೆ ಗೊತ್ತಾದರೆ, ಲೋಕಸಭೆ ಚುನಾವಣೆಯಲ್ಲಿ ಹಿನ್ನೆಡೆಯಾಗಲಿದೆ. ಹೀಗಾಗಿ, ಕಾಂಗ್ರೆಸ್‌ನವರು ಘರ್ ವಾಪ್ಸಿ ವದಂತಿ ಹಬ್ಬಿಸಿದ್ದಾರೆ ಎಂದು ಮಾಜಿ ಸಚಿವ ಬಿ. ಸಿ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಎಸ್ ಟಿ ಸೋಮಶೇಖರ್ ಬಿಜೆಪಿಯ ಸಭೆಯಲ್ಲಿ ಭಾಗವಹಿಸಿದ್ದಾರೆ. ಅವರ ಜೊತೆ ನಾನು ಮಾತನಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಬಗ್ಗೆ ಒಳ್ಳೆಯ ಮಾತನಾಡಿದ್ದಕ್ಕೆ ಈ ರೀತಿ ಪ್ರಚಾರ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದರು. ಕಾಂಗ್ರೆಸ್ಸಿನಲ್ಲಿ ಸಾಕಷ್ಟು ಗೊಂದಲ ಶುರುವಾಗಿದೆ. ರಾಜಣ್ಣ ಇದೇ ಅವಧಿಯಲ್ಲಿ ಜಿ. ಪರಮೇಶ್ವರ್ ಸಿಎಂ ಆಗಬೇಕು ಎಂದು ಹೇಳಿದ್ದಾರೆ. ಇನ್ನು ಡಿ ಕೆ ಶಿವಕುಮಾರ್ ನಾನು ಸಿಎಂ ಆಗಬೇಕು ಎನ್ನುತ್ತಿದ್ದಾರೆ. ಸಿದ್ದರಾಮಯ್ಯರದು ಒಂದು ಗುಂಪು. ಕಾಂಗ್ರೆಸ್‌ನಲ್ಲಿ ಮೂರ್ನಾಲ್ಕು ಗುಂಪಾಗಿದ್ದು, ಜನರನ್ನು ಬೇರೆ ಕಡೆ ಸೆಳೆಯಲು ಈ ರೀತಿ ಘರ್ ವಾಪ್ಸಿ ಮಾತುಗಳನ್ನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್‌ನಲ್ಲಿ 136 ಶಾಸಕರಿದ್ದಾಗ ಸಹ ಬೇರೆ ಪಕ್ಷದವರನ್ನ ಕರೆತರುತ್ತಿದ್ದಾರೆ ಎಂದರೆ ಪಕ್ಷದಲ್ಲಿ ಸರಿ ಇಲ್ಲ ಎನ್ನುವ ಸೂಚನೆ ನೀಡುತ್ತೆ. ಕಾಂಗ್ರೆಸ್‌ನಲ್ಲಿ ಬಿರುಕು ಇದೆ, ಒಳ್ಳೆ ವಾತಾವರಣ ಇಲ್ಲ. ಇನ್ನು ನಾವು 17 ಶಾಸಕರು ಮುಂಬೈಗೆ ಹೋದಾಗ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಯಾವುದೇ ಕಾರಣಕ್ಕೂ ವಲಸಿಗರನ್ನ ಕಾಂಗ್ರೆಸ್ಸಿಗೆ ಕರೆತರುವುದಿಲ್ಲ. ಸೂರ್ಯ ಚಂದ್ರರಿರುವ ತನಕ ವಲಸಿಗರನ್ನ ಕರೆತರುವುದಿಲ್ಲ ಎಂದಿದ್ದರು. ಈಗ ಸೂರ್ಯ ಚಂದ್ರ ಇಲ್ವಾ? ಎಂದು ಬಿ ಸಿ ಪಾಟೀಲ್ ಲೇವಡಿ ಮಾಡಿದ್ರು.
ಕಾಂಗ್ರೆಸ್‌ನಲ್ಲಿ ಅಭದ್ರತೆ ಕಾಡುತ್ತಿದೆ. ಹೀಗಾಗಿ ಈ ರೀತಿ ವದಂತಿ ಸೃಷ್ಟಿ ಮಾಡುತ್ತಿದ್ದಾರೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಿಜೆಪಿಗೆ ವಲಸಿಗರು ಬಂದಿದ್ದರಿಂದ ಬಿಜೆಪಿಯಲ್ಲಿ ಅಶಿಸ್ತು ಶುರುವಾಯಿತು ಎಂದು ನೀಡಿರುವ ಹೇಳಿಕೆ, ನಮಗೆ ಬೇಸರ ತಂದಿದೆ ಎಂದು ಪಾಟೀಲ್ ತಿಳಿಸಿದರು. ಈ ರೀತಿ ಹೇಳುತ್ತಿರುವ ಈಶ್ವರಪ್ಪ ಹಾವೇರಿ ಲೋಕಸಭೆ ಕ್ಷೇತ್ರಕ್ಕೆ ತಮ್ಮ ಮಗನ ಕೈಬಿಟ್ಟು ಹಾವೇರಿ ಬಿಜೆಪಿಯಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ಪಾಟೀಲ್ ಆರೋಪಿಸಿದರು.
ಕೂಸು ಹುಟ್ಟುವ ಮುನ್ನವೇ ಕುಲಾಯಿ ಹೊಲಿಸಲು ಹೊರಟಿದ್ದಾರೆ. ಪಕ್ಷ ಇನ್ನು ಯಾವ ಅಭ್ಯರ್ಥಿ ಘೋಷಣೆ ಮಾಡುವ ಮುನ್ನವೇ ಹಾವೇರಿಯಲ್ಲಿ ಬಿಜೆಪಿಗೆ ದ್ರೋಹ ಮಾಡಿದವರನ್ನ ಸೇರಿಸಿಕೊಂಡು ಈ ರೀತಿ ಮಾಡುತ್ತಿದ್ದಾರೆ. ನಾವು ವಲಸಿಗರು ಬಿಜೆಪಿ ವಿರುದ್ಧ ಕೆಲಸ ಮಾಡಿಲ್ಲ ಎಂದು ಬಿ ಸಿ ಪಾಟೀಲ್ ಹೇಳಿದರು.