ಹಾವೇರಿ: ಜಿಲ್ಲೆಯ ಕಾಂಗ್ರೆಸ್‌ನಲ್ಲಿ ಬಂಡಾಯ ದಿನದಿಂದ ದಿನಕ್ಕೆ ಅಧಿಕವಾಗಲಾರಂಭಿಸಿದೆ. ಕಾಂಗ್ರೆಸ್ ಹೈಕಮಾಂಡ್ ಹಾವೇರಿ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಅಭ್ಯರ್ಥಿ ಆಯ್ಕೆ ಮಾಡಿ ಪಟ್ಟಿ ಬಿಡುಗಡೆ ಮಾಡಿದೆ.
ಪಟ್ಟಿ ಬಿಡುಗಡೆಯಾದ ನಂತರ ಆರಂಭವಾದ ಬಂಡಾಯ ಶಮನವಾಗಿಲ್ಲ. ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರ ಬಂಡಾಯ ಹೆಚ್ಚಾಗಲಾರಂಭಿಸಿದೆ. ಹಾವೇರಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಾಜಿ ಶಾಸಕ ರುದ್ರಪ್ಪ ಲಮಾಣಿಗೆ ಟಿಕೆಟ್ ಘೋಷಣೆ ಮಾಡಿದೆ.
ಆದರೆ, ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಉಳಿದ ಅಭ್ಯರ್ಥಿಗಳ ಆಕಾಂಕ್ಷಿತರಲ್ಲಿ ಅಸಮಾಧಾನ ತಂದಿದೆ. ಈರಪ್ಪ ಲಮಾಣಿ, ಎಂ. ಎಂ ಹಿರೇಮಠ, ಶಿವಕುಮಾರ ತಾವರಗಿ, ಚಂದನ ರಾಣಿ ಸೇರಿದಂತೆ ಟಿಕೆಟ್ ಆಕಾಂಕ್ಷಿತರಿಗೆ ಹೈಕಮಾಂಡ್ ಆಯ್ಕೆ ಬೇಸರ ತರಿಸಿದೆ ಎಂಬ ಮಾತುಗಳು ಪಕ್ಷದಲ್ಲಿ ಕೇಳಿಬರುತ್ತಿವೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ ಎಂ ಹಿರೇಮಠ ಟಿಕೆಟ್ ಸಿಗದ ಕಾರಣಕ್ಕೆ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ:ರುದ್ರಪ್ಪ ಲಮಾಣಿ ಹಾವೇರಿ ಕ್ಷೇತ್ರದವರಲ್ಲ, ಅವರನ್ನ ಬಿಟ್ಟು ಸ್ಥಳೀಯರಿಗೆ ಟಿಕೆಟ್ ನೀಡಿ ಎನ್ನುತ್ತಿದ್ದಾರೆ ಶಿವಕುಮಾರ್ ತಾವರಗಿ. ಅಲ್ಲದೆ ಪ್ರತಿಭಟನೆ ಸಹ ನಡೆಸಿರುವ ಶಿವಕುಮಾರ್ ತಾವು ಸೂಕ್ತ ಅಭ್ಯರ್ಥಿಯಾಗಿದ್ದು, ಈಗ ರುದ್ರಪ್ಪ ಲಮಾಣಿಗೆ ನೀಡಿರುವ ಟಿಕೆಟ್ ಕ್ಯಾನ್ಸಲ್ ಮಾಡಿ ನನಗೆ ಟಿಕೆಟ್ ನೀಡಿ ಎನ್ನುತ್ತಿದ್ದಾರೆ. ಇನ್ನು ಕಾಂಗ್ರೆಸ್ ಕಮಾಂಡ್ ಬ್ಯಾಡಗಿ ಕ್ಷೇತ್ರಕ್ಕೆ ಮಾಜಿ ಶಾಸಕ ಬಸವರಾಜ್ ಶಿವಣ್ಣನವರ್ ಹೆಸರು ಘೋಷಣೆ ಮಾಡಿದೆ. ಇದು ಸ್ಥಳೀಯ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಮೂಡಿಸಿದೆ.
ಮಾಜಿ ಶಾಸಕ ಬಸವರಾಜ್ ಶಿವಣ್ಣನವರ್ ಕಳೆದ ಬಾರಿ ಸ್ಪರ್ಧಿಸಿ ಸೋಲುಂಡಿದ್ದ ಎಸ್ ಆರ್ ಪಾಟೀಲ್ ಇದೀಗ ಬಂಡಾಯದ ಮುನ್ಸೂಚನೆ ನೀಡಿದ್ದಾರೆ. ಹೈಕಮಾಂಡ್ ಹೇಳಿದಂತೆ ನಡೆದುಕೊಂಡಿಲ್ಲ. ಹೀಗಾಗಿ ಏಪ್ರಿಲ್ 8 ರವರೆಗೆ ನೋಡುತ್ತೇನೆ. ಮುಂದೆ ನನ್ನ ನಿರ್ಣಯ ಪ್ರಕಟಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಹಾನಗಲ್ ವಿಧಾನಸಭಾ ಕ್ಷೇತ್ರದ ಪರಿಸ್ಥಿತಿ ವಿಭಿನ್ನವಾಗಿಲ್ಲ. ಇಲ್ಲಿ ಕಾಂಗ್ರೆಸ್ ಹೈಕಮಾಂಡ್ ಸದ್ಯ ಹಾಲಿ ಶಾಸಕ ಶ್ರೀನಿವಾಸ ಮಾನೆಗೆ ಟಿಕೆಟ್ ನೀಡಿದೆ. ಆದರೆ ಕಳೆದ ಬಾರಿ ಪರಿಷತ್ ಆಸೆಯಿಂದ ಸ್ಥಾನ ತ್ಯಾಗ ಮಾಡಿದ್ದ ಮನೋಹರ್ ತಹಶೀಲ್ದಾರ್ ಇದೀಗ ಕಾಂಗ್ರೆಸ್‌ಗೆ ಗುಡ್ ಬೈ ಹೇಳಿದ್ದಾರೆ.
ಬಿ. ಹೆಚ್ ಬನ್ನಿಕೋಡ್‌ಗೆ ಅಸಮಾಧಾನ: ಕಾಂಗ್ರೆಸ್ ನಾಯಕರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಹೀಗಾಗಿ, ಇದೇ 7 ರಂದು ಹಾನಗಲ್‌ನಲ್ಲಿ ಜೆಡಿಎಸ್ ಸೇರುವುದಾಗಿ ಮನೋಹರ ತಹಶೀಲ್ದಾರ್ ತಿಳಿಸಿದ್ದಾರೆ. ಹಿರೇಕೆರೂರನಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಾಂಗ್ರೆಸ್‌ಗೆ ನೂತನವಾಗಿ ಆಗಮಿಸಿರುವ ಯು. ಬಿ ಬಣಕಾರ್ಗೆ ಟಿಕೆಟ್ ನೀಡಿದೆ. ಇದು ಕಳೆದ ಉಪಚುನಾವಣೆಯಲ್ಲಿ ಬಿ ಸಿ ಪಾಟೀಲ್ ವಿರುದ್ಧ ಸೋಲುಂಡಿದ್ದ ಬಿ. ಹೆಚ್ ಬನ್ನಿಕೋಡ್‌ಗೆ ಅಸಮಾಧಾನ ತಂದಿದೆ.
ಬನ್ನಿಕೋಡ್ ಬೆಂಬಲಿಗರು ಸಹ ತೀವ್ರ ಅಸಮಾಧಾನಗೊಂಡಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕರ್ತರ ಮತ್ತು ಬೆಂಬಲಿಗರ ಸಭೆ ನಡೆಸುವುದಾಗಿ ಬಿ. ಹೆಚ್ ಬನ್ನಿಕೋಡ್ ತಿಳಿಸಿದ್ದಾರೆ. ಇತ್ತ ರಾಣೆಬೆನ್ನೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಈ ಹಿಂದೆ ಸಚಿವರಾಗಿದ್ದ ವಿಧಾನಸಭೆ ಸಭಾಪತಿಯಾಗಿದ್ದ ಮಾಜಿ ಸಚಿವ ಕೆ ಬಿ ಕೋಳಿವಾಡ್ ಪುತ್ರ ಪ್ರಕಾಶ್ ಕೋಳಿವಾಡ್‌ಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.
ಆದರೆ ಇದು ಕಾಂಗ್ರೆಸ್‌ನ ರಾಣೆಬೆನ್ನೂರಿನ ಹಿರಿಯ ನಾಯಕರ ಕಣ್ಣು ಕೆಂಪಗಾಗಿಸಿದೆ. ಜಟ್ಟೆಪ್ಪಗೌಡ ಸೇರಿದಂತೆ ಹಲವು ಹಿರಿಯ ನಾಯಕರು ತಮಗೆ ಒಂದು ಅವಕಾಶ ಕಲ್ಪಿಸಬೇಕಾಗಿತ್ತು. ರಾಣೆಬೆನ್ನೂರು ಶಾಸಕ ಸ್ಥಾನ ಒಂದೇ ಮನೆತನಕ್ಕೆ ಫಿಕ್ಸಾ? ಎಂದು ಪ್ರಶ್ನಿಸುತ್ತಿದ್ದಾರೆ. ಈಗಲಾದರೂ ಕೆ. ಬಿ ಕೋಳಿವಾಡ್ ತಮ್ಮ ಮಗನಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಕಾರ್ಯಕರ್ತರು ಬೆಂಬಲಿಗರು ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇನ್ನು, ಹಾವೇರಿ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರ ಶಿಗ್ಗಾಂವಿ ಸವಣೂರು ಕ್ಷೇತ್ರಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಅಲ್ಲಿಯೂ ಸಹ ನಾಲ್ಕು ಬಾರಿ ಸೋಲುಂಡಿರುವ ಅಜ್ಜಂಪೀರ್ ಖಾದ್ರಿ ಆರಂಭದಲ್ಲಿ ಟಿಕೆಟ್‌ಗೆ ಪ್ರಯತ್ನಿಸಿದ್ದಾರೆ. ಆದರೆ ಹೈಕಮಾಂಡ್ ಅಲ್ಲಿ ವಿನಯ್ ಕುಲಕರ್ಣಿ ಟಿಕೆಟ್ ತೀರ್ಮಾನ ಮಾಡಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹಾವೇರಿ ಮತ್ತೊಮ್ಮೆ ಬಿಜೆಪಿಯ ಭದ್ರಕೋಟೆಯಾಗಲಿದೆ- ರಾಜಕೀಯ ವಿಶ್ಲೇಷಕರ ಅಭಿಪ್ರಾಯ: ಆದರೂ ಸಹ ಬಿಜೆಪಿ ತೊರೆದು ಇತ್ತೀಚಿಗೆ ಕಾಂಗ್ರೆಸ್ ಸೇರಿದ ಮಂಜುನಾಥ ಕುನ್ನೂರು, ವಿಧಾನಪರಿಷತ್ನ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಸಂಜೀವ ನೀರಲಗಿ, ಶಶಿಧರ್ ಯಲಿಗಾರ್ ಸೇರಿದಂತೆ ಹಲವು ನಾಯಕರ ಹೆಸರುಗಳು ಕೇಳಿಬರುತ್ತಿವೆ. ಇಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಪಕ್ಷದ ಅಭ್ಯರ್ಥಿಗಳಿಗಿಂತ ಸ್ವಕ್ಷದ ಬಂಡಾಯ ಶಮನಗೊಳಿಸುವುದೇ ದೊಡ್ಡ ತಲೆನೋವಾಗಿದೆ. ಕಾಂಗ್ರೆಸ್ ಹೈಕಮಾಂಡ್ ಶೀಘ್ರದಲ್ಲಿಯೇ ಈ ಬಂಡಾಯ ಶಮನ ಮಾಡದಿದ್ದರೆ ಹಾವೇರಿ ಮತ್ತೊಮ್ಮೆ ಬಿಜೆಪಿಯ ಭದ್ರಕೋಟಿಯಾಗುವುದರಲ್ಲಿ ಎರಡು ಮಾತಿಲ್ಲಾ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.
ಇದನ್ನೂ ಓದಿ :ನೀತಿ ಸಂಹಿತೆಯ ಬಿಸಿ: ಬಿ ಎಲ್ ಸಂತೋಷ್ ಭಾಷಣಕ್ಕೆ ಅಧಿಕಾರಿಗಳ ಬ್ರೇಕ್