ಹಾವೇರಿ:ಜಿಲ್ಲೆಯಶಿಗ್ಗಾವಿ ತಾಲೂಕಿನ ಬಂಕಾಪುರ ಪುರಸಭೆ ಮತ್ತು ಹಾವೇರಿ ತಾಲೂಕಿನ ಗುತ್ತಲದ ಪಟ್ಟಣದ ಪಂಚಾಯತ್‌ನಲ್ಲಿ ಕಾಂಗ್ರೆಸ್ ಗೆಲುವು ಕಂಡಿದೆ.
ಬಂಕಾಪುರ ಪುರಸಭೆಯಲ್ಲಿ ಒಟ್ಟು 23 ಸದಸ್ಯರ ಸಂಖ್ಯಾಬಲವಿದ್ದು, 14 ವಾರ್ಡ್ಗಳಲ್ಲಿ ಕಾಂಗ್ರೆಸ್ ಗೆದ್ದರೆ, ಬಿಜೆಪಿಯ 7 ಮತ್ತು ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವಿನ ನಗು ಬೀರಿದ್ದಾರೆ. 14 ಸ್ಥಾನ ಗೆದ್ದ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲಿದೆ. ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾವಿ ಕ್ಷೇತ್ರದ ಬಂಕಾಪುರ ಪುರಸಭೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿರುವುದು ಸಿಎಂ ಮತ್ತು ಬಿಜೆಪಿಗೆ ಹಿನ್ನಡೆಯಾದಂತಾಗಿದೆ.
ಹಾವೇರಿ ತಾಲೂಕಿನ ಗುತ್ತಲ ಪಟ್ಟಣ ಪಂಚಾಯತ್‌ನಲ್ಲೂ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. 18 ಸದಸ್ಯರ ಸಂಖ್ಯಾಬಲವಿರುವ ಗುತ್ತಲದಲ್ಲಿ ಕಾಂಗ್ರೆಸ್ 11 ಅಭ್ಯರ್ಥಿಗಳು ಗೆದ್ದಿದ್ದು, ಗುತ್ತಲ ಪಟ್ಟಣ ಪಂಚಾಯತ್ ಕೈ ವಶವಾಗಿದೆ. ಉಳಿದಂತೆ ಬಿಜೆಪಿ 6 ಮತ್ತು ಒಬ್ಬ ಪಕ್ಷೇತರ ಅಭ್ಯರ್ಥಿ ವಿಜಯ ಸಾಧಿಸಿದ್ದಾರೆ.