ಹಾವೇರಿ: ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣ ಖಂಡಿಸಿ ಸೋಮವಾರ ಹಾವೇರಿ ಜಿಲ್ಲೆ ರಾಣೆಬೆನ್ನೂರು ಬಂದ್ ಆಚರಿಸಲಾಯಿತು. ಸಿದ್ದರಾಮಯ್ಯ ಅಭಿಮಾನಿಗಳ ಸಂಘ, ಸರ್ವಜನಾಂಗ ಅಭಿಮಾನಿಗಳ ಸಂಘ ಬಂದ್ಗೆ ಕರೆ ನೀಡಿದ್ದವು. ಬಂದ್ ಅಂಗವಾಗಿ ರಾಣೆಬೆನ್ನೂರು ಪಟ್ಟಣದ ಕೆಇಬಿ ಗಣೇಶ ದೇವಸ್ಥಾನದಿಂದ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಕಾರ್ಯಕರ್ತರು ಸರ್ಕಾರದ ವಿರುದ್ಧ, ಬಿಜೆಪಿ ಕಾರ್ಯಕರ್ತರ ವಿರುದ್ಧ ಘೋಷಣೆ ಕೂಗಿದರು. ಆರ್ಎಸ್ಎಸ್ ಮತ್ತು ಸಂಘ ಪರಿವಾರದ ವಿರುದ್ಧ ಘೋಷಣೆ ಕೂಗಿದರು. ಸಿದ್ದರಾಮಯ್ಯರನ್ನ ಸೈದ್ಧಾಂತಿಕವಾಗಿ ಎದುರಿಸಲು ಆಗದವರು ಈ ರೀತಿ ಕೃತ್ಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪೊಲೀಸರಿಂದ ತಡೆ:ಸಿದ್ದರಾಮಯ್ಯ ಭಾವಚಿತ್ರ ಹಿಡಿದ ಅಭಿಮಾನಿಗಳು ಸಿದ್ದರಾಮಯ್ಯ ಸರ್ವಜನಾಂಗದ ನಾಯಕ ಎಂದು ಜಯಘೋಷ ಹಾಕಿದರು. ನಗರದ ಪ್ರಮುಖ ವೃತ್ತಗಳಲ್ಲಿ ಕೆಲ ಕಾಲ ನಿಂತು ಪ್ರತಿಭಟನೆ ನಡೆಸಿದರು. ನಂತರ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಶಾಸಕ ಅಪ್ಪಜ್ಜು ರಂಜನ್ ಪ್ರತಿಕೃತಿ ದಹನ ಮಾಡಲು ಮುಂದಾದಾಗ ಪ್ರತಿಭಟನಾಕಾರರನ್ನ ಪೊಲೀಸರು ತಡೆದರು.