ಹಾವೇರಿ:ಶುಕ್ರವಾರ ಗಾಳಿ ಮಳೆ ಸಿಡಿಲು ಸಹಿತ ಮಳೆಯಾದ ಹಿನ್ನೆಲೆ ಹಾವೇರಿ ತಾಲೂಕಿನ ಹೊಸಮೇಲ್ಮುರಿಯಲ್ಲಿ ಗಾಳಿ ರಭಸಕ್ಕೆ ರೈತನ ರೇಷ್ಮೆ ಮನೆ ನೆಲಕಚ್ಚಿದೆ.
ಗುಡುಗು, ಸಿಡಿಲು ಸಹಿತ ಮಳೆ: ನೆಲಕಚ್ಚಿದ ರೇಷ್ಮೆ ಮನೆ
ಹಾವೇರಿ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾದ ಪರಿಣಾಮ ಜೋರಾಗಿ ಬೀಸಿದ ಗಾಳಿಗೆ ರೈತರೊಬ್ಬರ ರೇಷ್ಮೆ ಮನೆ ಧರೆಗುರುಳಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.
50 ವರ್ಷದ ಗೋಣೆಪ್ಪ ಸುಣಗಾರ ಎಂಬುವವರಿಗೆ ಸೇರಿದ ರೇಷ್ಮಮನೆ ಧರೆಗುರುಳಿದೆ. ಮನೆಯಲ್ಲಿದ್ದ ಸುಮಾರು 1.50 ಲಕ್ಷ ರೂಪಾಯಿ ಬೆಳೆಬಾಳುವ ರೇಷ್ಮೆಹುಳುಗಳು ಹಾಳಾಗಿವೆ. ಇನ್ನೆರಡು ದಿನಗಳಲ್ಲಿ ಗೂಡು ಕಟ್ಟಲು ಆರಂಭಿಸುತ್ತಿದ್ದ ರೇಷ್ಮೆಹುಳುಗಳು ಹಾಳಾಗಿವೆ. 2.5 ಲಕ್ಷರೂಪಾಯಿ ಬೆಳೆ ಬಾಳುವ ರೇಷ್ಮೆಮನೆ ಜೊತೆಗೆ 1.5 ಲಕ್ಷ ರೂಪಾಯಿ ಮೌಲ್ಯದ ಹುಳು ನಾಶವಾಗಿವೆ.
ಈ ಕುರಿತಂತೆ ಅಧಿಕಾರಿಗಳಿಗೆ ತಿಳಿಸಿದರೆ ರೇಷ್ಮಮನೆ ಹಾನಿಯಾದರೆ ಯಾವುದೇ ಪರಿಹಾರ ಬರುವುದಿಲ್ಲ ಎನ್ನುತ್ತಿದ್ದಾರೆ ಎಂದು ಗೋಣೆಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಗಾಳಿಯಿಂದ ಹಾನಿಯಾದ ರೇಷ್ಮೆ ಮನೆ ಮತ್ತು ಹುಳುವಿನ ನಷ್ಟವನ್ನ ಸರ್ಕಾರ ಭರಿಸಬೇಕು ಎಂದು ಗೋಣೆಪ್ಪ ಮನವಿ ಮಾಡಿದ್ದಾರೆ.