ರಾಣೆಬೆನ್ನೂರು: ಅನರ್ಹ ಶಾಸಕ ಆರ್.ಶಂಕರ್ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಧನ್ಯವಾದ ಹೇಳುವ ಮೂಲಕ ಜನರಲ್ಲಿ ಅಚ್ಚರಿ ಮೂಡಿಸಿದರು.
ಮೆಗಾ ಮಾರುಕಟ್ಟೆಯಲ್ಲಿ ವಿವಿಧ ಮೂಲಭೂತ ಕಾಮಗಾರಿಗಳಿಗೆ ಚಾಲನೆ ತಾಲೂಕಿನ ಹೂಲಿಹಳ್ಳಿ ಬಳಿ ಇರುವ ಮೆಗಾ ಮಾರುಕಟ್ಟೆಯಲ್ಲಿ ವಿವಿಧ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಸಿಎಂ ಯಡಿಯೂರಪ್ಪ ಚಾಲನೆ ನೀಡಿದರು.
ಸುಮಾರು 220 ಎಕರೆ ವಿಸ್ತೀರ್ಣ ಹೊಂದಿರುವ ಈ ಮೆಗಾ ಮಾರುಕಟ್ಟೆಯಲ್ಲಿ ಈಗಾಗಲೇ ಹಲವು ಕಾಮಗಾರಿಗಳು ನಡೆದಿವೆ. ಒಟ್ಟು 105 ರೂ. ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಸಿಎಂ ಇಂದು ಶಂಕುಸ್ಥಾಪನೆ ನೆರವೇರಿಸಿದ್ರು.
ನಂತರ ಮಾತನಾಡಿದ ಸಿಎಂ, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಶಾಶ್ವತ ನೀರಾವರಿಗೆ 22 ಸಾವಿರ ಕೋಟಿ ಅನುದಾನ ನೀಡಿದೆ. ರಾಜ್ಯದಲ್ಲಿ ಅತಿವೃಷ್ಠಿಯಿಂದ ಸುಮಾರು 7 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಸರ್ಕಾರ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಪರಿಹಾರ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಆರ್.ಶಂಕರ್ಗೆ ಅಭಿನಂದನೆ ತಿಳಿಸಿದ ಸಿಎಂ:
ರಾಣೆಬೆನ್ನೂರು ಕ್ಷೇತ್ರದ ಅನರ್ಹ ಶಾಸಕ ಆರ್.ಶಂಕರ್ ಈ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಈ ವೇಳೆ ಸಿಎಂ ಯಡಿಯೂರಪ್ಪ ಭಾಷಣ ಮಾಡುವ ಸಮಯದಲ್ಲಿ ಅನರ್ಹ ಶಾಸಕರಾದ ಆರ್.ಶಂಕರ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಈ ಸಂದರ್ಭ ನೆರೆದಿದ್ದ ಜನರು ಸಿಎಂ ಮಾತಿಗೆ ಪ್ರತಿಕ್ರಿಯೆ ನೀಡದೆ ಸುಮ್ಮನಿದ್ದರು.
ಕಾರ್ಯಕ್ರಮದಲ್ಲಿ ಶಾಸಕರಾದ ನೆಹರು ಓಲೇಕಾರ, ವಿರೂಪಾಕ್ಷಪ್ಪ ಬಳ್ಳಾರಿ, ಎಪಿಎಂಸಿ ಸದಸ್ಯರಾದ ಬಸವರಾಜ ಹುಲ್ಲತ್ತಿ, ಸಿದ್ದಲಿಂಗಪ್ಪ ಕುಡಗೊಲ, ರಾಜೇಂದ್ರ ಬಸ್ಸೇನಾಯಕರ, ಸುರೇಶ ಬಿಲ್ಲಾಳ ಸೇರಿದಂತೆ ಇತರರು ಹಾಜರಿದ್ದರು.