ಶಿಗ್ಗಾಂವಿಯಲ್ಲಿ ಗ್ರಾಮದೇವತೆ ದರ್ಶನ ಪಡೆದು ನಾಮಪತ್ರ ಸಲ್ಲಿಸಿದ ಸಿಎಂ ಬೊಮ್ಮಾಯಿ ಹಾವೇರಿ/ಧಾರವಾಡ: ಸಿಎಂ ಬಸವರಾಜ ಬೊಮ್ಮಾಯಿ ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿ ಇಂದು ನಾಮಪತ್ರ ಸಲ್ಲಿಸಿದರು. ಇಂದು ಸಿಎಂ ಬೆಂಗಳೂರಿನಿಂದ ಶಿಗ್ಗಾಂವಿಗೆ ಆಗಮಿಸಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಂಸದ ಶಿವಕುಮಾರ್ ಉದಾಸಿ, ಸಚಿವ ಸಿ.ಸಿ ಪಾಟೀಲ್, ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡರು ಮತ್ತು ಕುಟುಂಬಸ್ಥರು ಸಿಎಂ ಬೊಮ್ಮಾಯಿಗೆ ಸಾಥ್ ನೀಡಿದರು.
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸಿಎಂ, ಕ್ಷೇತ್ರದಲ್ಲಿ ಈ ಹಿಂದಿನಕ್ಕಿಂತಲೂ ಹೆಚ್ಚಿನ ಬೆಂಬಲ ಇದೆ. ತಾಲೂಕಿನ ಅಭಿವೃದ್ಧಿಯನ್ನು ಕ್ಷೇತ್ರದ ಜನರು ನೋಡಿದ್ದು, ಅಭೂತಪೂರ್ವ ಬೆಂಬಲ ಸಿಕ್ಕಿದೆ. ಚುನಾವಣೆ ಅಂದ್ರೆನೇ ಕುಸ್ತಿ. ಎದುರಾಳಿ ಯಾರೇ ಬಂದ್ರೂ ಪರವಾಗಿಲ್ಲ ಎಂದು ತಿಳಿಸಿದರು.
ಇನ್ನು ಇದೇ ವೇಳೆ ಪಕ್ಷದಲ್ಲಿನ ನಾಯಕರ ಅಸಮಧಾನದ ಕುರಿತು ಪ್ರತಿಕ್ರಿಯೆ ನೀಡಿದ ಸಿಎಂ, ಹಾಲಿ ಶಾಸಕರಿಗೆ ಟಿಕೆಟ್ ಸಿಗದಿದ್ದಾಗ ಬಂಡಾಯ ಸಹಜ. ಕೊನೆಯ ಪಟ್ಟಿ ಬಿಡುಗಡೆಯಾಗಲಿದೆ. ಎಲ್ಲವೂ ಶಮನ ಆಗುತ್ತದೆ ಎಂದು ಹೇಳಿದರು.
ಇದಕ್ಕೂ ಮುನ್ನ ಬೆಂಗಳೂರಿನಿಂದ ಹುಬ್ಬಳ್ಳಿಗೆ ಆಗಮಿಸಿದ್ದ ಸಿಎಂ ಬೊಮ್ಮಾಯಿ ಅವರು ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿದ ಶ್ರೀಗಳ ದರ್ಶನ ಪಡೆದರು. ನಂತರ ಅಮರಗೋಳದಲ್ಲಿನ ತಂದೆ ತಾಯಿ ಸ್ಮಾರಕಕ್ಕೆ ಪೂಜೆ ಸಲ್ಲಿಸಿದ ಶಿಗ್ಗಾಂವಿಗೆ ಆಗಮಿಸಿದ್ದರು.
ಶಿಗ್ಗಾಂವಿ ಪುರಸಭೆ ಬಳಿಯ ಚನ್ನಮ್ಮ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಜೊತೆಗೆ ಗ್ರಾಮ ದೇವತೆ ದರ್ಶನ ಪಡೆದು ನಾಮಪತ್ರ ಸಲ್ಲಿಸಲು ತಹಶೀಲ್ದಾರ್ ಕಚೇರಿಗೆ ತೆರಳಿದರು.
ನಾಮಪತ್ರ ಸಲ್ಲಿಸಿದ ನಂತರ ವಿವಿಧೆಡೆ ಬಿಜೆಪಿ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಎಲ್ಲಾ ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳ ಮುಖಂಡರ ಸಭೆ ನಡೆಸಲಿದ್ದಾರೆ.
ನಾಮಪತ್ರ ಸಲ್ಲಿಸಲು ಕುಟುಂಬಸ್ಥರು ಸಾಥ್: ನಾಮಪತ್ರ ಸಲ್ಲಿಕೆ ಕುರಿತ ದಾಖಲೆಗಳ ಜೊತೆ ಶಿಗ್ಗಾಂವಿ ತಹಶೀಲ್ದಾರ್ ಕಚೇರಿಗೆ ಸಿಎಂ ಪುತ್ರ ಭರತ್ ಬೊಮ್ಮಾಯಿ ಆಗಮಿಸಿದ್ದರು.
ಹುರುಳಿಕುಪ್ಪಿ, ಕಾರಡಗಿ, ತಡಸ, ಧುಂಡಸಿ, ಹುಲುಗೂರು, ಕುಂದೂರು, ಜಿಲ್ಲಾ ಪಂಚಾಯಿತಿ ವ್ಯಾಪ್ತಿ ಮುಖಂಡರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಇನ್ನು ಅಭ್ಯರ್ಥಿಯ ಹುಡುಕಾಟ ಆರಂಭಿಸಿದ್ದರೆ ಸಿಎಂ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ಮೂಲಕ ತಮ್ಮ ಚುನಾವಣೆಯ ಪ್ರಚಾರ ಆರಂಭಿಸಿದರು.
ಇಂದು ಸಾಂಕೇತಿವಾಗಿ ನಾಮಪತ್ರ ಸಲ್ಲಿಸಿರುವ ಸಿಎಂ, ಏಪ್ರಿಲ್ 19 ರಂದು ಅದ್ಧೂರಿಯಾಗಿ ರೋಡ್ ಶೋ ಮೂಲಕ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಈ ವೇಳೆ, ನಟ ಸುದೀಪ್ ಕೂಡಾ ಸಾಥ್ ನೀಡುವ ಸಾಧ್ಯತೆ ಇದೆ. ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಘಟಾನುಘಟಿ ಮುಖಂಡರು ಸಿಎಂ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಉಪಸ್ಥಿತರಿರಲಿದ್ದಾರೆ.
ಸಿಎಂ ವಿರುದ್ಧ ಪ್ರತಿ ಸ್ಪರ್ಧಿಯಾಗಿ ಪದ್ಮರಾಜನ್: ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಹಾಲಿ ಶಾಸಕ ಮತ್ತು ರಾಜ್ಯದ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ಸ್ಪರ್ಧಿಸಿಲಿದ್ದಾರೆ. ಮತ್ತೊಂದೆಡೆ ಇವರ ಪ್ರತಿ ಸ್ಪರ್ಧಿಯಾಗಿ ಯಾರಿಗೆ ಕಣಕ್ಕಿಳಿಸಬೇಕು ಎಂಬ ಗೊಂದಲ್ಲದಲ್ಲಿ ಪ್ರತಿ ಪಕ್ಷಗಳಿದ್ದು, ಅಭ್ಯರ್ಥಿಗಳ ಹುಡುಕಾಟವನ್ನು ನಡೆಸಿವೆ. ಈ ಮಧ್ಯೆ ತಮಿಳುನಾಡು ಮೂಲದ ವ್ಯಕ್ತಿ ಕೆ.ಪದ್ಮರಾಜನ್ ಎಂಬುವವರು ಸಿಎಂ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲು ನಿನ್ನೆ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
ಕೆ.ಪದ್ಮರಾಜನ್ ದೇಶದಲ್ಲಿಯೇ ಅತಿಹೆಚ್ಚು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಇದೀಗ ಯಾರು ನಿರೀಕ್ಷೆ ಮಾಡದ ರೀತಿಯಲ್ಲಿ ಸಿಎಂ ವಿರುದ್ಧ ಸ್ಪರ್ಧೆಗೆ ಪದ್ಮರಾಜನ್ ಇಳಿದು ಅಚ್ಚರಿ ಮೂಡಿಸಿದ್ದಾರೆ. ತಮಿಳುನಾಡು ರಾಜ್ಯದ ಸೇಲಂ ಜಿಲ್ಲೆಯ ಮೆಟ್ಟೂರು ಮೂಲದ ಪದ್ಮರಾಜ್ ಟೈಯರ್ ವ್ಯಾಪಾರಿಯಾಗಿದ್ದಾರೆ. ದೇಶದ ವಿವಿಧ ರಾಜ್ಯಗಳಲ್ಲಿ ನಡೆದಿರುವ ಚುನಾವಣೆಗಳಲ್ಲಿ ಪದ್ಮರಾಜನ್ ಸ್ಪರ್ಧಿಸುವ ಮೂಲಕ ಒಟ್ಟು 223 ಚುನಾವಣೆಗಳನ್ನು ಎದುರಿಸಿದ್ದಾರೆ.
ಕೆ. ಪದ್ಮರಾಜನ್ ಈಗಾಗಲೇ ಸಿಎಂ ಬೊಮ್ಮಾಯಿ ವಿರುದ್ದ ಸ್ಪರ್ಧೆಗಾಗಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೊದಲು ಅವರು ಕಾಂಗ್ರೆಸ್‌ನ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ತಮಿಳುನಾಡಿನ ಸಿಎಂಗಳಾದ ಕರುಣಾನಿಧಿ, ಜಯಲಲಿತಾ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ವಿರುದ್ಧವೂ ಸ್ಪರ್ಧಿಸಿದ್ದಾರೆ.
ಇದನ್ನೂ ಓದಿ:ಶೆಟ್ಟರ್ ಸಭೆ ಬಗ್ಗೆ ಗೊತ್ತಿದೆ..2 ದಿನದಲ್ಲಿ ಮೂರನೇ ಪಟ್ಟಿ ಬಿಡುಗಡೆ: ಸಿಎಂ ಬೊಮ್ಮಾಯಿ