ಹಾವೇರಿ: ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವ ಕುರಿತಂತೆ ಸರ್ಕಾರ ಚೆಲ್ಲಾಟವಾಡಿಕೊಂಡೇ ಬರುತ್ತಿದೆ ಎಂದು ಪಂಚಮಸಾಲಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಆರೋಪಿಸಿದ್ದಾರೆ. ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಳ್ಳಿನ ಸರಮಾಲೆಯನ್ನ ಸುರಿಸಿದೆ. ಮೊಸಳೆ ಕಣ್ಣೀರು ಸುರಿಸುವುದು, ತಾಯಿ ಮೇಲೆ ಆಣಿ ಮಾಡುವದು ಹಿಂದೆ ಸಹ ಸಿಎಂ ಯಡಿಯೂರಪ್ಪ ಇದೇ ರೀತಿ ಮಾಡಿದ್ದರು.
ಮಾಜಿ ಸಿಎಂ ಯಡಿಯೂರಪ್ಪ ಸಹ ಸಮಾಜ ಉಪಯೋಗಿಸಿಕೊಂಡು ಮುಖ್ಯಮಂತ್ರಿಯಾದರು. ಆದರೆ, ಪಂಚಮಸಾಲಿಗಳಿಗೆ ಮೋಸ ಮಾಡಿದರು. ತಮ್ಮ ಸಮಾಜಕ್ಕೆ ಮೀಸಲಾತಿ ತಗೆದುಕೊಂಡು ಈಗ ನಮ್ಮ ಸಮಾಜಕ್ಕೆ ಮೀಸಲಾತಿ ನೀಡದಿರುವದು ಎಷ್ಟು ಸರಿ. ನಮಗೆ ಮೀಸಲಾತಿ ಕೊಟ್ಟರೆ ನಮ್ಮ ಸಮಾಜ ಎಲ್ಲಿ ಮುಂದಕ್ಕೆ ಬರುವದು ಎಂಬ ಹೊಟ್ಟೆಕಿಚ್ಚು ಅವರಿಗೆ ಕಾಡುತ್ತಿದೆ ಹೊಟ್ಟೆಕಿಚ್ಚಿನಿಂದ ಯಡಿಯೂರಪ್ಪ ನಮಗೆ ಮೀಸಲಾತಿ ನೀಡಲಿಲ್ಲ. ಪ್ರಸ್ತುತ ಸಿಎಂ ಬಸವರಾಜ ಬೊಮ್ಮಾಯಿ ಸಹ ಅದನ್ನೇ ಮಾಡುತ್ತಾ ಇದ್ದಾರೆ ಎಂದು ಕಾಶಪ್ಪನವರ್ ಆರೋಪಿಸಿದರು.
ಮಾಡು ಇಲ್ಲವೇ ಮಡಿ ಹೋರಾಟ:ಇದರಿಂದ ರೋಸಿಹೋಗಿರುವ ಪಂಚಮಸಾಲಿಗಳು ಇದೀಗ ಅಂತಿಮ ಹಂತಕ್ಕೆ ಬಂದಿದ್ದೇವೆ. ಇದೇ 13 ರಂದು ಹಾವೇರಿ ಜಿಲ್ಲೆ ಶಿಗ್ಗಾಂವಿಯಲ್ಲಿರುವ ಸಿಎಂ ಮನೆ ಮುತ್ತಿಗೆ ಹಾಕುವ ಕಾರ್ಯವನ್ನ ಪಂಚಮಸಾಲಿಗಳು ಮಾಡಲಿದ್ದಾರೆ ಎಂದು ತಿಳಿಸಿದರು. ಇದು ಅಂತಿಮ ಹೋರಾಟ ಕೊನೆಯ ಹೋರಾಟ ಮಾಡು ಇಲ್ಲವೆ ಮಡಿ, ಮಡಿಯುವುದಾದರೇ ಮೀಸಲಾತಿ ಪಡೆದು ಮಡಿ ಎಂಬ ಹೋರಾಟ. ಸರ್ಕಾರ ಮೀಸಲಾತಿ ನೀಡಬೇಕು, ಇಲ್ಲ ತಿರಸ್ಕಾರ ಮಾಡಬೇಕು ಎರಡರಲ್ಲಿ ಒಂದಾಗಬೇಕು. ಪ್ರತಿ ಬಾರಿ ಹೋರಾಟ ಕೊನೆಯ ಹೋರಾಟ ಎಂದು ಹೇಳಿ ಹೇಳಿ ನನಗೆ ಬೇಸರವಾಗಿದೆ. ಆದರೆ ಇದು ನಿಜವಾಗಿ ಕೊನೆಯ ಹೋರಾಟ ಎಲ್ಲ ಪಂಚಮಸಾಲಿ ಸಿಎಂ ಮನೆ ಮುತ್ತಿಗೆಗೆ ಬರಬೇಕು ಎಂದು ಕಾಶಪ್ಪನವರ್ ಒತ್ತಾಯಿಸಿದ್ದಾರೆ.