ಹಾವೇರಿ:ಸಿಎಂ ಬಸವರಾಜ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ 2 ಎ ಮೀಸಲಾತಿ ನೀಡುವ ಕುರಿತಂತೆ ಮೂರು ಬಾರಿ ಮಾತು ಕೊಟ್ಟಿದ್ದರು. ಆದರೆ ಮೂರು ಬಾರಿಯೂ ಸಹ ಅವರು ಮಾತು ತಪ್ಪಿದ್ದಾರೆ. ಹೀಗಾಗಿ ಮೀಸಲಾತಿ ಹೋರಾಟ ಮತ್ತೆ ಪ್ರಾರಂಭ ಮಾಡಲಾಗಿದೆ ಎಂದು ಕೂಡಲಸಂಗಮದ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಶ್ರೀಗಳು ತಿಳಿಸಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಈ ಕುರಿತಂತೆ ತಮ್ಮ ಸಮಾಜಕ್ಕೆ ನಾವು ಮಾತು ಕೊಟ್ಟಿದ್ದೆವು. ಅದರಂತೆ ಮತ್ತೆ ಹೋರಾಟ ಆರಂಭಿಸಿದ್ದೇವೆ. ಹೋರಾಟದ ಭಾಗವಾಗಿ ಜೂನ್ 27 ರಂದು ಸಿಎಂ ಬಸವರಾಜ ಬೊಮ್ಮಾಯಿ ಶಿಗ್ಗಾವಿ ನಿವಾಸದ ಮುಂದೆ ಒಂದು ದಿನದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಅಂದು ಮುಂಜಾನೆ 9 ರಿಂದ ಸಂಜೆ ನಾಲ್ಕು ಗಂಟೆಯವರೆಗೆ ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ. ಮುಂಜಾನೆ 9 ಗಂಟೆಗೆ ಶಿಗ್ಗಾವಿಯ ಚೆನ್ನಮ್ಮ ವೃತ್ತದಿಂದ ಬೊಮ್ಮಾಯಿ ಮನೆ ಅವರಿಗೆ ಬೃಹತ್ ಮೆರವಣಿಗೆ ನಡೆಸುವುದಾಗಿ ಶ್ರೀಗಳು ತಿಳಿಸಿದರು.
ಈಗಾಗಲೇ ಪಂಚಮಸಾಲಿ ಸಮುದಾಯದ ಹಲವು ಹೋರಾಟಗಳಿಗೆ ಚಾಲನೆ ನೀಡಿರುವ ಸಮುದಾಯದ ಹೋರಾಟಕ್ಕಾಗಿ ಮಂತ್ರಿ ಸ್ಥಾನ ಕಳೆದುಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿಎಂ ನಿವಾಸದ ಮುಂದಿನ ಧರಣಿ ಸತ್ಯಾಗ್ರಹಕ್ಕೆ ಚಾಲನೆ ನೀಡಲಿದ್ದಾರೆ ಎಂದು ಕೂಡಲಶ್ರೀಗಳು ತಿಳಿಸಿದರು. ಅಂದಿನ ಕಾರ್ಯಕ್ರಮಕ್ಕೆ ಮಾಜಿ ಶಾಸಕರಾದ ವಿನಯ್ ಕುಲಕರ್ಣಿ, ವಿಜಿಯಾನಂದ ಕಾಶಪ್ಪನವರ್, ಮತ್ತು ಹೆಚ್.ಎಸ್.ಶಿವಶಂಕರ್ ಸಹ ಪಾಲ್ಗೊಳ್ಳಲಿದ್ದಾರೆ.