ಹಾವೇರಿ: ವಿಧಾನಸೌಧದ ವೇದಿಕೆಯೇ ದೊಡ್ಡ ಬಹಿರಂಗ ಅಖಾಡ. ಅಲ್ಲಿಯೇ ನಾವು ಬಹಿರಂಗ ಸವಾಲು ಹಾಕಿದೀವಿ. ಅವರು ಬರೀ ಮಾತಿನ ಮಂಟಪ ಕಟ್ಟಬೇಕಂತಾರೆ. ಅದಕ್ಕೂ ಮುಂಚೆ ನಾವೇನು ಕೆಲಸ ಮಾಡಿದ್ದೇವಂತ ಬಂದು ನೋಡಲಿ ಎಂದು ಪ್ರತಿಪಕ್ಷಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ನಿಮಿತ್ತ ಹಾನ್ಗಲ್ನಲ್ಲಿ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಕಿತ್ತೂರು ರಾಣಿ ಚೆನ್ನಮ್ಮ ಒಬ್ಬ ವೀರ-ದಿಟ್ಟ ಮಹಿಳೆ. ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ. ಅವರು ಎಲ್ಲರಿಗೂ ಸ್ಫೂರ್ತಿ. ಇಡೀ ಕನ್ನಡನಾಡಿಗೆ ಸ್ಫೂರ್ತಿ. ರಾಣಿ ಚೆನ್ನಮ್ಮ ಜಯಂತಿಯನ್ನ ಇಂದು ನಾವು ಅರ್ಥಪೂರ್ಣವಾಗಿ ಆಚರಿಸಿದ್ದೇವೆ ಎಂದು ಹೇಳಿದರು.
ಹಾನ್ಗಲ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಪಂಥಾಹ್ವಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ವಿಧಾನಸೌಧದಲ್ಲೇ ನಾವು ಬಹಿರಂಗ ಸವಾಲು ಹಾಕಿದೀವಿ. ಮತ್ತೇನು ಸವಾಲು ಹಾಕೋದಿದೆ. ಅವರು ಬರೀ ಮಾತಿನ ಮಂಟಪ ಕಟ್ಟಬೇಕಂತಾರೆ. ಅದಕ್ಕೂ ಮುಂಚೆ ಅವರು ನಾವೇನು ಕೆಲಸ ಮಾಡಿದ್ದೇವಂತ ಬಂದು ನೋಡಲಿ. ಅದನ್ನ ಬಿಟ್ಟು ಅವರ ಬೆಂಬಲಿಗರ ಮಾತು ಕೇಳಿಕೊಂಡು ಮಾತಾಡೋದು ಸರಿಯಲ್ಲ. ನಾವು ಏನು ಮಾಡಿದ್ದೇವೆ ಅನ್ನೋದನ್ನ ನಿನ್ನೆ ದಾಖಲೆಗಳ ಸಮೇತ ಹೇಳಿದ್ದೇನೆ. ಕೆಲವು ಊರುಗಳ ಹೆಸರುಗಳನ್ನೂ ಹೇಳಿದ್ದೇನೆ. ಅಲ್ಲಿಗೆ ಹೋಗಿ ನೋಡಿಕೊಂಡು ಬರಲಿ ಎಂದು ಹೇಳಿದರು.
ಬಿಜೆಪಿ ಸೋಲಿನ ಭೀತಿಯಿಂದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಪ್ರಚಾರಕ್ಕೆ ಕರೆಸಿದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಸಿಎಂ, ಹಾಗಾದ್ರೆ ಸೋಲಿನ ಭೀತಿಯಿಂದ ಸಿದ್ದರಾಮಯ್ಯ ಅವರನ್ನ ಕ್ಷೇತ್ರಕ್ಕೆ ಮತ್ತೆ ಕರೆಸಿದ್ರಾ ಕಾಂಗ್ರೆಸ್ನವರು ಅಂತಾ ಪ್ರಶ್ನಿಸಿದರು.