ಹಾವೇರಿ:ಯಡಿಯೂರಪ್ಪ ಸಿಎಂ ಆದಾಗ ರೈತರಿಗೆ ನಾಲ್ಕು ಸಾವಿರ ಕೊಡೋಕೆ ತೀರ್ಮಾನ ಮಾಡಿದರು. ತಾಲೂಕಿನ 38,433 ಜನ ರೈತರಿಗೆ ಕಿಸಾನ್ ಸಮ್ಮಾನ ಹಣ ಸಿಕ್ಕಿದೆ. ಈ ಕುಟುಂಬಗಳು ಯಾರಿಗೆ ವೋಟು ಹಾಕುತ್ತವೆ? ಯಡಿಯೂರಪ್ಪ, ಮೋದಿಯವರ ಪಕ್ಷ ಬಿಜೆಪಿಗೆ ಮತ ಹಾಕ್ತಾರೆ. ನಮ್ಮ ವಿಶ್ವಾಸ ದಾಖಲೆಗಳಲ್ಲಿದೆ. ಕೋವಿಡ್ ಸಮಯದಲ್ಲಿ ಮಾಡಿದ ಸಹಾಯವನ್ನ ರಾಜಕೀಯ ಬಂಡವಾಳ ಮಾಡಿಕೊಳ್ತಿದ್ದಾರೆ. ಇದು ನ್ಯಾಯಾನಾ? ಯೋಗ್ಯನಾ? ಎಂದು ಸಿಎಂ ಬೊಮ್ಮಾಯಿ ಪ್ರತಿಪಕ್ಷವನ್ನು ಪ್ರಶ್ನಿಸಿದರು.
ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕಾಂಶಿ, ಹೊಸೂರು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಪ್ರಚಾರ ನಡೆಸಿದರು. ಕಟ್ಟಡ ಕಾರ್ಮಿಕರು, ಹೂವು ಮಾರುವವರಿಗೆ ಕೋವಿಡ್ ಸಮಯದಲ್ಲಿ ಯಡಿಯೂರಪ್ಪ ಹಣ ಕೊಟ್ಟರು. ಮೆಕ್ಕೆಜೋಳ ಬೆಳಗಾರರಿಗೆ ₹17 ಕೋಟಿ 63 ಲಕ್ಷ ರೂ. ಬಿಡುಗಡೆ ಮಾಡಿದರು. ಮೂವತ್ತೈದು ಸಾವಿರ ಜನ ರೈತರಿಗೆ ಸಹಾಯ ಸಿಕ್ಕಿದೆ. ಸುಳ್ಳು ಹೇಳಿ ಜನರನ್ನ ಮೋಡಿ ಮಾಡಬಹುದು ಅಂತ ತಿಳ್ಕೊಂಡಿದ್ದಾರೆ. ಏನು ಮಾಡಿದ್ದೀರಿ, ಏನು ಮಾಡಿದ್ದೀರಿ ಅಂತಾ ಪ್ರತಿಪಕ್ಷದವರು ಕೇಳಿದರೆ ಅವರಿಗೆ ಎಷ್ಟು ಬಾರಿ ಹೇಳಬೇಕು. ಈ ದಾಖಲೆಗಳನ್ನ ಪತ್ರಕರ್ತರು ಅವರಿಗೆ ಕೊಟ್ಟು ಕಳಿಸಿ ಎಂದರು.
ಉದಾಸಿ ಕ್ಷೇತ್ರಕ್ಕೆ ಸಾಕಷ್ಟು ಹಣ ತಂದಿದ್ದಾರೆ
ಸಂಸದ ಶಿವಕುಮಾರ ಉದಾಸಿಯವರು ಅವರ ತಂದೆಯವರ ನಿಧನದ ನಂತರ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದಿದ್ದಾರೆ. ಅಲ್ಪಸಂಖ್ಯಾತರ ಬಗ್ಗೆ ಕಾಂಗ್ರೆಸ್ನವರು ಎಲ್ಲಿಲ್ಲದ ಪ್ರೀತಿ ತೋರಿಸ್ತಾರೆ. ಐದು ವರ್ಷ ಬಾವಿಯಲ್ಲಿ ಇಟ್ಟಿರುತ್ತಾರೆ. ಐದು ವರ್ಷದ ನಂತರ ಹಗ್ಗ ಕೊಟ್ಟು ಮೇಲೆತ್ತಿ ವೋಟು ಹಾಕಿಸಿಕೊಂಡು ಮತ್ತೆ ಬಾವಿಗೆ ಬಿಟ್ಟುಬಿಡ್ತಾರೆ. ಅಲ್ಪಸಂಖ್ಯಾತರಿಗೆ ದೊಡ್ಡ ಅನ್ಯಾಯ ಯಾರಾದರೂ ಮಾಡಿದ್ದರೆ ಅದು ಕಾಂಗ್ರೆಸ್. ಅಲ್ಪಸಂಖ್ಯಾತರು ಸರಿದರೆ ಕಾಂಗ್ರೆಸ್ ಇರುವುದಿಲ್ಲ. ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ಕಾಂಗ್ರೆಸ್ ಪಕ್ಷವಿದೆ ಎಂದು ತಿಳಿಸಿದರು.
ಅಭಿವೃದ್ಧಿಯೇ ನಮ್ಮ ಅಜೆಂಡಾ
ಸುಳ್ಳಿನ ರಾಜಕಾರಣ ಬಹಳ ದಿನಗಳು ನಡೆಯೋದಿಲ್ಲ. ಅಭಿವೃದ್ಧಿಯೇ ನಮ್ಮ ಅಜೆಂಡಾ. ಮಾಡಿರುವ, ಮಾಡುತ್ತಿರುವ ಕೆಲಸಗಳಿಂದ ನಾವು ಮತ ಕೇಳುತ್ತೇವೆ. ಕಾಂಗ್ರೆಸ್ ಮುಳುಗ್ತಿರೋ ಹಡುಗು. ದೇಶದ ಭೂಪಟ ನೋಡಿದ್ರೆ ಎಲ್ಲ ಕಡೆ ಮುಳುಗಿದೆ. ಕರ್ನಾಟಕದಲ್ಲಿ ಸ್ವಲ್ಪ ಇದೆ. ನೀವು ಬಿಜೆಪಿಗೆ ಮತ ಕೊಟ್ಟರೆ ಅದು ಮುಳುಗುತ್ತೆ ಎಂದರು.
ಅಭಿವೃದ್ಧಿ ಹರಿಕಾರ ದಿವಂಗತ ಉದಾಸಿ ಅವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನ ಮುಂದುವರೆಸಿಕೊಂಡು ಹೋಗಲು ಬಿಜೆಪಿಗೆ ಮತ ಹಾಕಿ. ಶಿವರಾಜ ಸಜ್ಜನರನ್ನ ಗೆಲ್ಲಿಸಿ. ಉದಾಸಿಯವರ ಜೊತೆಯಾಗಿ ಕೆಲಸ ಮಾಡಿದ್ದಾರೆ. ನಾನಂತೂ ಈ ಜಿಲ್ಲೆಯವನು. ದಿವಂಗತ ಉದಾಸಿಯವರ ಜೊತೆ ಓಡಾಡಿದ್ದೇನೆ. ನಿಮ್ಮ ಋಣ ನಮ್ಮ ಮೇಲಿದೆ. ನಿಮ್ಮ ಮತಕ್ಕೆ ಬೆಲೆ ಇದೆ. ನಿಮ್ಮ ಮತದ ಗೌರವ ಉಳಿಸುವ ಕೆಲಸ ಮಾಡುತ್ತೇವೆ. ಇಲ್ಲಿ ಸೇರಿರುವ ಜನರೇ ನಮಗೆ ಒಪ್ಪಿಗೆಯ ಮುದ್ರೆ ಎಂದು ಹೇಳಿದರು.
ಶಿವರಾಜ ಸಜ್ಜನರ ಪರ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ:
ಜಿಲ್ಲೆಯ ಹಾನಗಲ್ ತಾಲೂಕಿನ ಚಿಕ್ಕಾಂಶಿ, ಹೊಸೂರು ಗ್ರಾಮಗಳಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ ನಡೆಸಿದರು. ಬರಿ ಟೀಕೆ ಟಿಪ್ಪಣಿ ಮಾಡೋಕೆ ನಾವು ಬಂದಿಲ್ಲ. ದೇಶದ ಜನರು ಕಾಂಗ್ರೆಸ್ ಮರೆತಿದ್ದಾರೆ. ಲೋಕಸಭೆಯಲ್ಲಿ ಯಂಕ, ಸೀನ, ನಾಣಿ ಅನ್ನೋ ರೀತಿ ಕಾಂಗ್ರೆಸ್ನವರು ಇದ್ದಾರೆ. ಹಣ, ಹೆಂಡ, ತೋಳ್ಬಲ, ಜಾತಿಯ ವಿಷಬೀಜ ಬಿತ್ತಿ ವೋಟು ತೆಗೆದುಕೊಳ್ಳೋ ಕಾಲ ಹೋಗಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದರು.
ಕೈ ನಾಯಕರ ಬುಡುಬುಡಕೆ ಮಾತಿಗೆ ಜನ ಬೆಲೆ ಕೊಡುವುದಿಲ್ಲ
ಕಾಂಗ್ರೆಸ್ನವರ ಬುಡುಬುಡುಕೆ ಮಾತಿಗೆ ಜನರು ಬೆಲೆ ಕೊಡುವುದಿಲ್ಲ ಅನ್ನೋದು ಕಾಂಗ್ರೆಸ್ನವರಿಗೆ ಅರ್ಥ ಆಗಿದೆ. ಈ ಚುನಾವಣೆ ಫಲಿತಾಂಶ ರಾಜಕೀಯ ದೊಂಬರಾಟದಿಂದ ಆಗೋದಿಲ್ಲ ಅನ್ನೋದನ್ನ ತೋರಿಸಬೇಕು. ಹೀಗಾಗಿ ದೊಡ್ಡ ಅಂತರದಿಂದ ಸಜ್ಜನರನ್ನ ಗೆಲ್ಲಿಸಬೇಕು. ಅಲ್ಲೊಬ್ಬ ಇಲ್ಲೊಬ್ಬರು ಇರುವ ಕಾಂಗ್ರೆಸ್ಸಿಗರ ಮನವೊಲಿಸಿ ಬಿಜೆಪಿ ಅಭ್ಯರ್ಥಿಗೆ ವೋಟು ಕೊಡಿಸಿ ಎಂದರು.
ಅಂಬೇಡ್ಕರ್ ಅವರನ್ನ ಎರಡು ಬಾರಿ ಚುನಾವಣೇಲಿ ಸೋಲಿಸಿದವರು ಕಾಂಗ್ರೆಸ್ನವರು. ದೆಹಲಿಯಲ್ಲಿ ಅಂಬೇಡ್ಕರ್ ಅವರ ಶವಸಂಸ್ಕಾರ ಮಾಡಲು ಬಿಡಲಿಲ್ಲ ಕಾಂಗ್ರೆಸ್ನವರು. ನನಗ್ಯಾರೂ ರಾಜೀನಾಮೆ ಕೊಡಿ ಅಂತಾ ಹೇಳಲಿಲ್ಲ. ಅದರೂ ರಾಜೀನಾಮೆ ಕೊಟ್ಟೆ. ಈ ಚುನಾವಣೆ ನಂತರ ಪ್ರತಿಯೊಂದು ಜಿಲ್ಲಾ ಕೇಂದ್ರಕ್ಕೆ ಬರುವವನಿದ್ದೇನೆ. ಚುನಾವಣೆ ಬರುತ್ತೆ, ಹೋಗುತ್ತೆ. ಅದಕ್ಕಾಗಿ ಇಲ್ಲಿಗೆ ಬಂದಿಲ್ಲ. ಮುಂದಿನ ಚುನಾವಣೇಲಿ 140 ಸ್ಥಾನಗಳನ್ನ ಗೆದ್ದು ಅಧಿಕಾರ ಹಿಡಿಯೋದು ಈ ಯಡಿಯೂರಪ್ಪ ಸಂಕಲ್ಪ ಎಂದು ಹೇಳಿದರು.
ಪ್ರಧಾನಿ ಮೋದಿ ಯುವಕರ ಮೇಲೆ ಬಹಳ ಭರವಸೆ ಇಟ್ಟುಕೊಂಡಿದ್ದಾರೆ. ಮಹಿಳೆಯರು, ಎಸ್ಸಿ/ಎಸ್ಟಿ ಕಾರ್ಯಕರ್ತರನ್ನ ಪಕ್ಷಕ್ಕೆ ಸೇರಿಸಿ ಪಕ್ಷ ಬಲಪಡಿಸೋ ಕೆಲಸ ಮಾಡಿ. ಬಹಳ ದೊಡ್ಡ ಅಂತರದಲ್ಲಿ ನಾವು ಗೆದ್ದಾಗಿದೆ. ಇನ್ನೂ ದೊಡ್ಡ ಅಂತರ ಬರಬೇಕು. ಜಗತ್ತು ಪ್ರಧಾನಿ ಅವರನ್ನ ಅಚ್ಚರಿಯಿಂದ ನೋಡ್ತಿದೆ. ಇನ್ನಷ್ಟು ಪಕ್ಷ ಸಂಘಟನೆ ಮಾಡಬೇಕು. ಅಕ್ಟೋಬರ್ 30ಕ್ಕೆ ಕಮಲದ ಗುರುತಿಗೆ ಮತ ನೀಡಿ ಗೆಲ್ಲಿಸಿ. ನಿಮ್ಮ ಪ್ರೀತಿ ಅಭಿಮಾನಕ್ಕೆ ನಾನು ಋಣಿಯಾಗಿದ್ದೇನೆ ಎಂದರು.