ಹಾವೇರಿ:ಹಾನಗಲ್ ವಿಧಾನಸಭಾ ಕ್ಷೇತ್ರ ಕೈ ವಶ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇಂದು ತಾಲೂಕು ಕ್ರೀಡಾಂಗಣದಲ್ಲಿ ಬಿಜೆಪಿ ಸಮಾವೇಶ ನಡೆಸಿದ್ದು, ಸಿಎಂ ಬಸವರಾಜ ಬೊಮ್ಮಾಯಿಯವರು ಅಭ್ಯರ್ಥಿ ಶಿವರಾಜ ಸಜ್ಜನರ್ ಪರ ಮತಯಾಚಿಸಿದ್ದಾರೆ.
‘ಹಾನಗಲ್ ಕ್ಷೇತ್ರದ ಜನರು ಬುದ್ಧಿವಂತರು’
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನಾಲ್ಕು ದಶಕಗಳ ಕಾಲ ಸಿ.ಎಂ. ಉದಾಸಿಯವರು ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮತ್ಯಾರು ಅವರಿಗೆ ಸಾಟಿಯಿಲ್ಲ ಎಂದು ಉದಾಸಿಯವರ ಗುಣಗಾನ ಮಾಡಿದ್ರು. ಉದಾಸಿಯವರು ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ಸಿಗರು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ನವರು, ಈ ಕ್ಷೇತ್ರವನ್ನು ಸಂಪೂರ್ಣವಾಗಿ ನೋಡಿಲ್ಲ. ನಿನ್ನೆ, ಮೊನ್ನೆ ಬಂದು ದೊಡ್ಡ ಸಾಧನೆ ಮಾಡಿದಂತೆ ಮತ ಕೇಳುತ್ತಿದ್ದಾರೆ. ಈ ಕ್ಷೇತ್ರದ ಜನರು ಬಹಳ ಬುದ್ಧಿವಂತರಿದ್ದು, ಕಾಂಗ್ರೆಸ್ಸಿಗರಂಥ ಎಷ್ಟೋ ಜನರನ್ನು ನೋಡಿದ್ದಾರೆ ಎಂದರು.
ಬಿಜೆಪಿ ಬಡವರ ಪರ
ಯಡಿಯೂರಪ್ಪ ಸರ್ಕಾರ ಕೋವಿಡ್ಅನ್ನು ಯಶಸ್ವಿಯಾಗಿ ನಿಭಾಯಿಸಿತು. ಬಿಕ್ಕಟ್ಟಿನ ಸಂದರ್ಭದಲ್ಲಿ ನಮ್ಮ ಸರ್ಕಾರ ಫುಡ್ ಕಿಟ್ಗಳನ್ನು ವಿತರಿಸಿದ್ದು, ಬಡವರ ಪರ ನಿಂತಿದೆ. ಕಾಂಗ್ರೆಸ್ನವರು ಏನು ಸಹಾಯ ಮಾಡಿದ್ದಾರೆ ಎಂದು ಪ್ರಶ್ನಿಸಿದ್ರು. ನೀವು ಕೆರೆಗಳನ್ನ ತುಂಬಿಸಬೇಕು ಅಂತಾ ದಿವಂಗತ ಉದಾಸಿ ಅಣ್ಣನವರಿಗೆ ಹೇಳಿದ್ರಿ. ಆಗ ಉದಾಸಿ ಅಣ್ಣನವರು ಮತ್ತು ನಾನು ಸೇರಿ ಯಡಿಯೂರಪ್ಪ ಅವರನ್ನ ಭೇಟಿ ಮಾಡಿ ಬಾಳಂಬೀಡ ಮತ್ತು ಹಿರೇಕಾಂಶಿ ಯೋಜನೆ ಜಾರಿಗೊಳಿಸಿದೆವು. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಬರುವ ವರ್ಷದಲ್ಲಿ ನಾನಾ ಯೋಜನೆಗಳನ್ನು ಜಾರಿಗೊಳಿಸುತ್ತೇವೆ ಎಂದು ಭರವಸೆ ನೀಡಿದ್ರು.
ಕ್ಷೇತ್ರದ ಎಲ್ಲಾ ಜನ್ರು ಅಡಿಕೆ ಬೆಳಿಬೇಕು
ಅಡಿಕೆ ಬೆಲೆ ಗಗನಕ್ಕೇರಿದ್ದು, ಬೆಳೆಗಾರರು ಸಂತಸದಿಂದ್ದಾರೆ. ರೈತರು ನಮ್ಮ ಕ್ಷೇತ್ರದಲ್ಲಿಯೂ ಹೆಚ್ಚಾಗಿ ಅಡಿಕೆ ಬೆಳೆಯಬೇಕು. ತಲೆಗೆ ರೇಷ್ಮೆ, ಕಾಲಿಗೆ ಜರ್ಕಬುರ್ಕ(ಕೊಲ್ಲಾಪುರ) ಚಪ್ಪಲಿ ಹಾಕಿಕೊಳ್ಳಬೇಕು. ನಮ್ಮದು ರೈತಪರ ಸರ್ಕಾರ ಎಂದರು.
ಕಾಂಗ್ರೆಸ್ಸಿಗರು ಬೆಂಜ್ ಕಾರಿನ ಗಿರಾಕಿಗಳು
ಸಿದ್ದರಾಮಯ್ಯ ಕೈಯಲ್ಲಿ ಬಾರುಕೋಲಿದ್ದರೆ, ಡಿಕೆಶಿ ಕೈಯಲ್ಲಿ ಹಗ್ಗ ಇರುತ್ತೆ. ಅವರು ಒಮ್ಮೊಮ್ಮೆ ಸೈಕಲ್ ಮೇಲೆ ಬರ್ತಾರೆ. ಒಮ್ಮೊಮ್ಮೆ ಟಾಂಗಾದಲ್ಲಿ ಬರ್ತಾರೆ. ಇವ್ರೆಲ್ಲಾ ಬೆಂಜ್ ಕಾರಿನ ಗಿರಾಕಿಗಳಾಗಿದ್ದು, ಇವರಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸಿಎಂ ವಾಗ್ದಾಳಿ ನಡೆಸಿದರು.