ಹಾವೇರಿ:ಉಕ್ರೇನ್ - ರಷ್ಯಾ ಯುದ್ಧದಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರವನ್ನು ತಾಯ್ನಾಡಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಇದು ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೊಂದಿರುವ ವರ್ಚಸ್ಸು ಮತ್ತು ತಾಕತ್ತು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರುವ ನವೀನ್ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಬಳಿಕ ಮಾತನಾಡಿದ ಅವರು, ರಷ್ಯಾ- ಉಕ್ರೇನ್ ನಡುವಿನ ಭೀಕರ ಯುದ್ಧದ ನಡುವೆಯೂ ನವೀನ್ ಪಾರ್ಥಿವ ಶರೀರವನ್ನು ಸುರಕ್ಷಿತವಾಗಿ ತಲುಪಿಸುವಲ್ಲಿ ಮೋದಿಯವರು ತೀವ್ರ ಪ್ರಯತ್ನ ಮಾಡಿದ್ದಾರೆ. ಈ ಒಂದು ಘಟನೆಯಿಂದ ವಿಶ್ವದಲ್ಲಿ ಮೋದಿ ಅವರ ಶಕ್ತಿ ಏನು ಎಂಬುದನ್ನು ತಿಳಿಸುತ್ತದೆ. ಪ್ರಧಾನಿಯವರು ನವೀನ್ 'ಆಪ್ ಕಾ ಬೇಟಾ ನಹೀ, ದೇಶ ಕಾ ಬೇಟಾ' ಎಂದು ಯುವಕನ ತಂದೆ ಶೇಖರಪ್ಪ ಅವರಿಗೆ ಹೇಳಿದ್ದರು. ಅದರಂತೆ ನಡೆದುಕೊಂಡಿದ್ದಾರೆ ಎಂದರು.
ಉಕ್ರೇನ್ ರಾಯಭಾರಿ ಕಚೇರಿ, ಭಾರತೀಯ ರಾಯಭಾರಿ ಕಚೇರಿ, ಪೋಲ್ಯಾಂಡ್ನ ಭಾರತೀಯ ರಾಯಭಾರಿ ಕಚೇರಿಗಳು ಸೇರಿದಂತೆ ಅಕ್ಕಪಕ್ಕದ ಇಂಡಿಯನ್ ರಾಯಭಾರಿ ಕಚೇರಿಗಳು ಬಹಳ ಮುತುವರ್ಜಿ ವಹಿಸಿ ಇಷ್ಟು ದಿನಗಳ ಕಾಲ ನವೀನ್ ದೇಹವನ್ನು ಸಂರಕ್ಷಣೆ ಮಾಡಿದ್ದಾರೆ. ಪ್ರಮುಖವಾಗಿ ಕೇಂದ್ರ ಸಚಿವ ಜೈಶಂಕರ್ ಅವರಿಂದ ಈ ಕೆಲಸ ಸಾಧ್ಯವಾಗಿದೆ. ಯುದ್ಧ ಭೂಮಿಯಿಂದ ಸೈನಿಕರನ್ನು ತರುವುದೇ ಕಷ್ಟವಾಗಿರುತ್ತದೆ. ಅಂತಹದರಲ್ಲಿ ನಾಗರಿಕರ ಮೃತದೇಹವನ್ನು ತರುವುದು ಬಹಳ ಕಷ್ಟ.