ಹಾವೇರಿ :ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಕೆರೆಗೆ ಬಾಗಿನ ಅರ್ಪಿಸಿದರು. ಕೆರೆಗೆ ಬಾಗಿನ ಅರ್ಪಿಸಿ ನಂತರ ಕಾರ್ಯಕ್ರಮದಲ್ಲಿ ಮಾತನಾಡುವಾಗ ಕೆಲಕಾಲ ಭಾವುಕರಾದರು.
ತವರು ಮನೆಯಲ್ಲಿ ಭಾವುಕರಾದ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಳಗ್ಗೆ ಬೆಂಗಳೂರಲ್ಲಿ ಪತ್ರಕರ್ತರು ಏನ್ ಸರ್ ತವರು ಮನೆಗೆ ಹೊಂಟಿದ್ದೀರಿ ಅಂತಾ ಕೇಳಿದರು. ಹೌದು. ನಾನು ನನ್ನ ತವರು ಮನೆಗೆ ಹೊರಟಿದ್ದೇನೆ ಅಂದೆ. ಅಲ್ಲಿ ಸಿಗೋ ಸಂತೋಷ ಎಲ್ಲೂ ಸಿಗೋದಿಲ್ಲ ಅಂದೆ.
ನಿಮ್ಮ ಆಶೀರ್ವಾದ, ನಮ್ಮ ನಾಯಕರಾದ ಯಡಿಯೂರಪ್ಪ, ಪ್ರಧಾನಿ ಮೋದಿ, ಅಮಿತ್ ಶಾ ಮತ್ತು ನಡ್ಡಾರ ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಮಹಾಜನತೆಯ ಸೇವೆ ಮಾಡೋ ಅವಕಾಶ ಸಿಕ್ಕಿದೆ ಎಂದು ಭಾವುಕರಾದರು.
ಅದರ ಶ್ರೇಯಸ್ಸು ನಿಮಗೆ ಸಲ್ಲುತ್ತದೆ. ನೀವು ನನ್ನನ್ನ ಗುರುತಿಸಿ, ಬೆಳೆಸಿ, ಹೃದಯದಲ್ಲಿ ಇಟ್ಟುಕೊಂಡಿದ್ದೀರಿ. ಅದಕ್ಕೆ ನಿಮಗೆ ಅನಂತ ಅನಂತ ಧನ್ಯವಾದಗಳು. ಆ ನಿಮ್ಮ ವಿಶ್ವಾಸಕ್ಕೆ ಸದಾಕಾಲ ನ್ಯಾಯವನ್ನ ಕೊಡುತ್ತೇನೆ.
ಯಾವುದೇ ರೀತಿಯ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇನೆ. ನಿಮ್ಮ ಜೊತೆ ಹೆಚ್ಚು ಸಮಯ ಕಳೆಯಲು ಆಗುತ್ತಿಲ್ಲ, ನಿಮ್ಮ ಮಗನನ್ನು ಒಂದು ಉನ್ನತ ಕಾರ್ಯಕ್ಕಾಗಿ ದುಡಿಯಲು ಕಳಿಸಿದ್ದೀರಿ ಅಂತಾ ತಿಳಿದುಕೊಳ್ಳಿ ಎಂದರು.
ಮಿಲಿಟರಿಗೆ ದೇಶ ಕಾಯೋಕೆ ಹೇಗೆ ಮಗನನ್ನು ಕಳಿಸುತ್ತೀರಿ ಹಾಗೆ ತಿಳಿದುಕೊಳ್ಳಿ. ನೀನು ದೇಶ ಕಾಯಪ್ಪ ಅಂದಾಗ ಅವನು ದೇಶ ಕಾಯೋಕೆ ಹೆಚ್ಚಿನ ಸಮಯ ಕೊಡುತ್ತಾನೆ. ರಜೆ ಕೊಟ್ಟಾಗೊಮ್ಮೆ ಊರಿಗೆ ಬರ್ತಾನೆ. ಮನೆಯ ಮಗ ದೇಶ ಸೇವೆಗೆ ಕಳಿಸುವ ಹಾಗೆ ನನ್ನನ್ನು ದೇಶ ಕಟ್ಟುವ, ನಾಡು ಕಟ್ಟುವ ಕೆಲಸಕ್ಕೆ ಕಳಿಸಿದ್ದೀರಿ.
ಅದಕ್ಕೆ ನ್ಯಾಯವನ್ನ ಕೊಡುತ್ತೇನೆ. ನಾನು ಯಾವುದೇ ಯೋಜನೆ ರೂಪಿಸಿದರೂ ನಿಮ್ಮನ್ನ ನೆನಪಿಸಿಕೊಳ್ಳುತ್ತೇನೆ. ಎಲ್ಲ ಯೋಜನೆಗಳಲ್ಲೂ ಶಿಗ್ಗಾಂವಿ-ಸವಣೂರು ಕ್ಷೇತ್ರದ ಅಭಿವೃದ್ಧಿಯನ್ನೂ ಮಾಡುತ್ತೇನೆ. ಶಿಗ್ಗಾಂವಿ ಕ್ಷೇತ್ರವನ್ನ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದರು.
ಇದನ್ನೂ ಓದಿ : ಕುಕ್ಕೆ ಸುಬ್ರಹ್ಮಣ್ಯದಲ್ಲಿ ತುಲಾಭಾರ ನೆರವೇರಿಸಿದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ದಂಪತಿ