ಹಾವೇರಿ :ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ನಿವಾಸದ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ನಡೆಸಿದ್ದ ದಾಳಿ ಸಂಬಂಧ ರಾಣೆಬೆನ್ನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಣೆಬೆನ್ನೂರು ತಹಸೀಲ್ದಾರ್ ಗುರುಬಸವರಾಜ ಅವರು ನೀಡಿದ್ದ ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ಅವರು ಚುನಾವಣೆ ಸಮೀಪ ಇರುವ ದಿನಗಳಲ್ಲಿ ಜನರಿಗೆ ನೀಡಲು ಸೀರೆ, ಬ್ಯಾಗ್, ತಟ್ಟೆ, ಲೋಟಗಳನ್ನು ಸಂಗ್ರಹಿಸಿಟ್ಟಿರುವುದು ಅಧಿಕಾರಿಗಳ ದಾಳಿ ವೇಳೆ ಕಂಡುಬಂದಿದೆ. ಹೀಗಾಗಿ ಶಂಕರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ಕಲಂ 171ಇ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮಾರ್ಚ್ 14ರ ರಾತ್ರಿ ಆರ್. ಶಂಕರ್ ನಿವಾಸದ ಮೇಲೆ ಉಪ ವಿಭಾಗಾಧಿಕಾರಿ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಅಧಿಕಾರಿಗಳ ದಾಳಿ ಬೆನ್ನಲ್ಲೇ ಶಂಕರ್ ಮನೆ ಬಳಿ ಕೆಲ ಅಭಿಮಾನಿಗಳು, ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಚುನಾವಣೆಯಲ್ಲಿ ಶಂಕರ್ ಗೆಲುವಿನಿಂದ ಭಯಗೊಂಡ ಕೆಲವರು ದಾಳಿ ಮಾಡಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.