ರಾಣೆಬೆನ್ನೂರು :ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಚಿಹ್ನೆ, ಮುಖಂಡರ ಭಾವಚಿತ್ರ ಬಳಸಿದ ಹಿನ್ನೆಲೆ ಮುದೇನೂರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ.
ಗ್ರಾಮ ಪಂಚಾಯತ್ ಚುನಾವಣೆಗೆ ಪಕ್ಷದ ಚಿಹ್ನೆ, ಮುಖಂಡರ ಭಾವಚಿತ್ರ ಬಳಸಿದ ಅಭ್ಯರ್ಥಿಗಳ ಮೇಲೆ ಕೇಸು ರಾಣೆಬೆನ್ನೂರು ತಾಲೂಕಿನ ಮುದೇನೂರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ನಾಗರಾಜಯ್ಯ ಬಿಳಿಸನೂರಮಠ, ಫಕ್ಕೀರಪ್ಪ ತೇರದಹಳ್ಳಿ ಹಾಗೂ ರೇಖಾ ಜಮಾಲಣ್ಣನವರ ಎಂಬ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಮೇಲೆ ಚುನಾವಣಾಧಿಕಾರಿ ಕೆ. ಕೃಷ್ಣಮೂರ್ತಿ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಗ್ರಾಮ ಪಂಚಾಯತ್ ಚುನಾವಣೆ ಪಕ್ಷ ರಹಿತ ಚುನಾವಣೆ ಎಂದು ಚುನಾವಣೆ ಆಯೋಗ ಸ್ಪಷ್ಟಪಡಿಸಿದೆ. ಆದರೆ, ಕಳೆದ ಮೂರು ದಿನಗಳ ಹಿಂದೆ ಚುನಾವಣಾಧಿಕಾರಿಗಳು ಅಭ್ಯರ್ಥಿಗಳಿಗೆ ಚಿಹ್ನೆಗಳನ್ನ ಹಂಚಿಕೆ ಮಾಡಿದ್ದಾರೆ. ಈ ಸಮಯದಲ್ಲಿ ಪ್ರಚಾರದ ಪ್ರತಿಯಲ್ಲಿ ಬಿಜೆಪಿ ಪಕ್ಷದ ಚಿಹ್ನೆ, ಬಿಜೆಪಿ ಮುಖಂಡರ ಭಾವಚಿತ್ರಗಳನ್ನು ಮುದ್ರಿಸಿ ಪ್ರಚಾರ ನಡೆಸಿದ್ದಾರೆ.
ಇದನ್ನು ಪರಿಶೀಲನೆ ಮಾಡಿದ ಚುನಾವಣಾಧಿಕಾರಿಗಳು ಮೂವರು ಅಭ್ಯರ್ಥಿಗಳ ಮೇಲೆ ಕೇಸು ದಾಖಲಿಸಿದ್ದಾರೆ.