ಕರ್ನಾಟಕ

karnataka

ETV Bharat / state

86ನೇ ಕನ್ನಡ ಸಾಹಿತ್ಯ ಸಮ್ಮೇಳನ.. ಹಾವೇರಿಯಲ್ಲಿ ಗಣ್ಯರ ಕೊರಳೇರಲು, ಕಂಪು ಸೂಸಲು ಏಲಕ್ಕಿ ಮಾಲೆಗಳು ಸಿದ್ಧ - ಈಟಿವಿ ಭಾರತ್ ಕನ್ನಡ ಸುದ್ದಿ

ಹಾವೇರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಟವೇಗಾರ ಕುಟುಂಬ ಏಲಕ್ಕಿ ಮಾಲೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ.

ಏಲಕ್ಕಿ ಮಾಲೆ
ಏಲಕ್ಕಿ ಮಾಲೆ

By

Published : Dec 11, 2022, 10:10 PM IST

ಏಲಕ್ಕಿ ಮಾಲೆ ತಯಾರಕ ಉಸ್ಮಾನಸಾಬ್ ಪಟವೇಗಾರ ಅವರು ಮಾತನಾಡಿದರು

ಹಾವೇರಿ: ನಗರದಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಜನವರಿ 6, 7 ಮತ್ತು 8 ರಂದು ನಡೆಯುವ ಸಮ್ಮೇಳನಕ್ಕೆ ಎಲ್ಲ ರೀತಿಯ ತಯಾರಿ ಆರಂಭಿಸಲಾಗಿದೆ. ಇದೇ ಪ್ರಥಮ ಬಾರಿಗೆ ಹಾವೇರಿ ನಗರದಲ್ಲಿ ಸಮ್ಮೇಳನ ನಡೆಯುತ್ತಿರುವುದು ಏಲಕ್ಕಿ ಮಾಲೆ ತಯಾರಕರಿಗೆ ಸಂತಸ ತಂದಿದೆ.

ಏಲಕ್ಕಿ ಮಾಲೆ

ಸಮ್ಮೇಳನಕ್ಕೆ ಬರುವ ಸಾಹಿತಿಗಳ, ಮಠಾಧೀಶರ, ಜನಪ್ರತಿನಿಧಿಗಳ ಕೊರಳನ್ನೇರಲು ಏಲಕ್ಕಿ ಮಾಲೆಗಳು ಸಿದ್ಧವಾಗುತ್ತಿವೆ. ಹಾವೇರಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪಟವೇಗಾರ ಕುಟುಂಬ ಏಲಕ್ಕಿ ಮಾಲೆಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದೆ. ಮುಂಬೈ, ಸಕಲೇಶಪುರ, ತಮಿಳುನಾಡಿನಿಂದ ಕಚ್ಚಾ ಸಾಮಗ್ರಿ ತರಿಸಿಕೊಂಡಿರುವ ಕುಟುಂಬದ ಐವರು ಸದಸ್ಯರು ಏಲಕ್ಕಿ ಮಾಲೆ ತಯಾರಿಕೆಯಲ್ಲಿ ನಿರತವಾಗಿದ್ದಾರೆ.

ಏಲಕ್ಕಿ ಮಾಲೆ ತಯಾರಕರು

ಒಂದು ಎಳೆಯ ಮಾಲೆಯಿಂದ 11 ಎಳೆಯ ಮಾಲೆಗಳು ಸಿದ್ಧಗೊಳ್ಳುತ್ತಿವೆ. 150 ರೂಪಾಯಿಯಿಂದ ಆರಂಭವಾಗುವ ಮಾಲೆಗಳ ಬೆಲೆ 10 ಸಾವಿರ ರೂಪಾಯಿವರೆಗೆ ಇದೆ. ವಿಶೇಷವಾಗಿ ಬೇಡಿಕೆ ಸಲ್ಲಿಸಿದರೆ, ಮೂವತ್ತು ಸಾವಿರದಿಂದ 50 ಸಾವಿರ ರೂಪಾಯಿವರೆಗಿನ ಬೆಲೆಯ ಮಾಲೆಗಳನ್ನು ಪಟವೇಗಾರ ಕುಟುಂಬ ತಯಾರಿಸುತ್ತದೆ.

ಬ್ರಿಟನ್ ಪ್ರಧಾನಿ ಕೊರಳನ್ನು ಅಲಂಕರಿಸಿದ ಏಲಕ್ಕಿ ಮಾಲೆ: ವಿವಿಧೆಡೆ ನಡೆದ ಸಾಹಿತ್ಯ ಸಮ್ಮೇಳನ ಸೇರಿದಂತೆ ಶುಭ ಸಮಾರಂಭಗಳಲ್ಲಿ ಏಲಕ್ಕಿ ಮಾಲೆ ಬಳಸಲಾಗುತ್ತದೆ. ಹಾವೇರಿಯ ಏಲಕ್ಕಿ ಮಾಲೆಗಳ ಕಂಪು ದೇಶ ವಿದೇಶಗಳಲ್ಲೂ ಹರಡಿದೆ. ಕಳೆದ ಕೆಲ ದಿನಗಳಿಂದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಕೊರಳನ್ನು ಸಹ ಹಾವೇರಿ ಏಲಕ್ಕಿ ಮಾಲೆ ಅಲಂಕರಿಸಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮ ಕೊರಳನ್ನು ಸಹ ಹಾವೇರಿ ಏಲಕ್ಕಿ ಮಾಲೆ ಅಲಂಕರಿಸಿರುವುದು ಇಲ್ಲಿನ ಏಲಕ್ಕಿ ಮಾಲೆ ಪ್ರಸಿದ್ಧಿಗೆ ಸಾಕ್ಷಿಯಾಗಿದೆ.

ಶಿಕ್ಷಕಿ ಅಕ್ಕಮಹಾದೇವಿ ಮುದ್ದಿ ಅವರು ಮಾತನಾಡಿದರು

ಪಟವೇಗಾರ ಕುಟುಂಬದಿಂದ ಏಲಕ್ಕಿ ಮಾಲೆ ತಯಾರಿಕೆ: ಅಮೆರಿಕ ಅಧ್ಯಕ್ಷ ಸೇರಿದಂತೆ ಅತಿಗಣ್ಯ ವ್ಯಕ್ತಿಗಳನ್ನು ಹಾವೇರಿಯ ಏಲಕ್ಕಿ ಮಾಲೆ ತಲುಪಿರುವುದು ಜಿಲ್ಲೆ ಮತ್ತು ರಾಜ್ಯಕ್ಕೆ ಹೆಮ್ಮೆಯ ವಿಚಾರವಾಗಿದೆ. ಹಾವೇರಿಯಲ್ಲಿ ಬೆರಳೆಣಿಕೆಯ ಕುಟುಂಬಗಳು ಮಾತ್ರ ಏಲಕ್ಕಿ ಮಾಲೆಳನ್ನು ತಯಾರಿಸುತ್ತಿವೆ. ಅದರಲ್ಲಿ ಪಟವೇಗಾರ ಕುಟುಂಬ ಕಳೆದ ಒಂದು ಶತಮಾನದಿಂದ ಏಲಕ್ಕಿ ಮಾಲೆ ತಯಾರಿಸುತ್ತಿದ್ದು, ಪ್ರಸಿದ್ಧಿ ಪಡೆದಿದೆ.

ಹಾವೇರಿ ಕಂಪು ಹರಡುತ್ತಿದೆ: ಹಾವೇರಿ ಸೇರಿದಂತೆ ಸುತ್ತಮುತ್ತ ನಡೆಯುವ ಸಮಾರಂಭಗಳಿಗೆ ಇಲ್ಲಿಯ ಮಾಲೆಗಳನ್ನೇ ಜನರು ಖರೀದಿಸುತ್ತಾರೆ. ಪಟವೇಗಾರ ಕುಟುಂಬ ಬಹು ವಿಶಿಷ್ಠವಾಗಿ ಏಲಕ್ಕಿ ಮಾಲೆ ತಯಾರಿಸುತ್ತಿದ್ದು, ಖ್ಯಾತಿ ಪಡೆದಿದೆ. ಹಾವೇರಿಯಲ್ಲಿ ಮೊದಲು ಮಾರವಾಡಿಗಳು ದೂರದ ಊರುಗಳಿಂದ ಕಚ್ಚಾ ಏಲಕ್ಕಿ ತಂದು ಅದನ್ನ ಅರಳಿಸುತ್ತಿದ್ದರು. ಆ ರೀತಿ ಅರಳಿಸಿದ ಏಲಕ್ಕಿಯನ್ನು ನಗರದ ವಿವಿಧೆಡೆ ಓಣಿಯಲ್ಲಿ ಹಾಕುವುದರಿಂದ ನಗರದಲ್ಲಿ ಏಲಕ್ಕಿ ಕಂಪು ಹರಡುತ್ತಿತ್ತು. ಈ ರೀತಿ ಮಾರಾಟಕ್ಕೆ ಬಂದ ಏಲಕ್ಕಿ ಕಲಾವಿದರಿಂದ ಮಾಲೆಯ ರೂಪ ಪಡೆದು ಇದೀಗ ದೇಶ-ವಿದೇಶಗಳಲ್ಲಿ ಹಾವೇರಿ ಜೊತೆಗೆ ಕನ್ನಡನಾಡಿನ ಕಂಪು ಹರಡುತ್ತಿರುವುದು ಹೆಮ್ಮೆ ಮತ್ತು ಹೆಗ್ಗುರುತು ಎಂದರೆ ಅತಿಶಯೋಕ್ತಿ ಅಲ್ಲ.

ಓದಿ:ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಗ್ಗೆ ಡಾ.ಮಹೇಶ್‌ ಜೋಶಿ ಸ್ಪಷ್ಟನೆ

ABOUT THE AUTHOR

...view details