ಹಾವೇರಿ : ಕಳೆದ 13 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲೆಯ ಬ್ಯಾಡಗಿ ಪಟ್ಟಣದ ಮುಖ್ಯರಸ್ತೆಯನ್ನು ಅಗಲೀಕರಣಗೊಳಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಇಂದು ಬ್ಯಾಡಗಿ ಪಟ್ಟಣ ಬಂದ್ ಗೆ ಕರೆ ನೀಡಿದ್ದವು. ಸಾಗರ ಗಜೇಂದ್ರಗಡ ಸಂಪರ್ಕಿಸುವ ರಸ್ತೆ ಬ್ಯಾಡಗಿ ಪಟ್ಟಣದ ಮೂಲಕ ಹಾದುಹೋಗುತ್ತದೆ. ಈ ರಸ್ತೆಯನ್ನು ಅಗಲೀಕರಣಗೊಳಿಸುವಂತೆ ಒತ್ತಾಯಿಸಿ ಕಳೆದ 13 ವರ್ಷಗಳಿಂದ ಹಲವಾರು ಬಾರಿ ಪ್ರತಿಭಟನೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರು ದೂರಿದ್ದಾರೆ.
ಈಗಾಗಲೇ ರಸ್ತೆ ಅಗಲೀಕರಣಕ್ಕಾಗಿ ರಸ್ತೆ ಬದಿಯ ಹಲವು ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಈ ಬಗ್ಗೆ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದ ರಸ್ತೆ ಅಗಲೀಕರಣ ನೆನೆಗುದಿಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕಳೆದ 12 ದಿನಗಳಿಂದ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದ್ದ ರಸ್ತೆ ಹೋರಾಟ ಸಮಿತಿ ಇಂದು ಬ್ಯಾಡಗಿ ಬಂದ್‌ಗೆ ಕರೆ ನೀಡಿದೆ. ರಸ್ತೆ ಅಗಲೀಕರಣ ಸಮಿತಿ ಕರೆ ನೀಡಿದ್ದ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದವು.
ಈ ಕುರಿತು ಮಾತನಾಡಿದ ಹಿರಿಯ ನ್ಯಾಯವಾದಿ ಆರ್.ವಿ. ಬೆಳಕೇರಿಮಠ, ಬ್ಯಾಡಗಿ ಮೆಣಸಿನಕಾಯಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಆದರೆ ಇಲ್ಲಿನ ಬ್ಯಾಡಗಿ ಮೆಣಸಿನ ಮಾರುಕಟ್ಟೆಗೂ ಇಲ್ಲಿ ಕಷ್ಟವಾಗಿದೆ. ಬ್ಯಾಡಗಿಯಲ್ಲಿನ ಮುಖ್ಯ ರಸ್ತೆ ಇದಾಗಿದ್ದು, ಇದರ ಅಭಿವೃದ್ಧಿಗೆ ಸರ್ಕಾರ ಗಮನ ಹರಿಸಬೇಕೆಂದು ಎಂದು ಹೇಳಿದ್ದಾರೆ.