ಹಾವೇರಿ: ಗ್ರಾಮೀಣ ಸೊಗಡಿನ ಕ್ರೀಡೆಗಳು ಎಂದರೆ ದನ ಬೆದರಿಸುವುದು, ಎತ್ತಿನಗಾಡಿ ಓಟ ಮತ್ತು ಟಗರು ಕಾಳಗ. ಜಿಲ್ಲೆಯಲ್ಲಿ ಬಹುತೇಕ ಕೃಷಿ ಚಟುವಟಿಕೆಗಳು ಮುಕ್ತಾಯ ಹಂತಕ್ಕೆ ತಲುಪಿದ್ದು, ಈ ಹಿನ್ನೆಲೆ ರೈತರು ಜಾನಪದ ಕ್ರೀಡೆಗಳನ್ನು ಆಯೋಜಿಸಿ ಮನರಂಜನೆ ಪಡೆಯುತ್ತಿದ್ದಾರೆ.
ಹಾವೇರಿ ಸಮೀಪದ ದೇವಗಿರಿಯಲ್ಲಾಪುರದಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯಮಟ್ಟದ ಖಾಲಿ ಗಾಡಾ ಓಡಿಸುವ ಸ್ಪರ್ಧೆ (ಖಾಲಿ ಎತ್ತಿನ ಗಾಡಿ ಓಡಿಸುವ ಸ್ಪರ್ಧೆ) ಆಯೋಜನೆ ಮಾಡಲಾಗಿತ್ತು. ಕಲ್ಮೇಶ್ವರ ಹೋರಿಯ ಸವಿ ನೆನಪಿಗಾಗಿ ಕಲ್ಮೇಶ್ವರ ಯುವಕ ಸಂಘದವರು ಈ ಸ್ಪರ್ಧೆ ಆಯೋಜಿಸಿದ್ದರು. ಹಾವೇರಿ, ಗದಗ, ಧಾರವಾಡ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಂದ ಅನೇಕ ರೈತರು ಪಾಲ್ಗೊಂಡಿದ್ದರು.
ನಿಗದಿತ ವೇಳೆಯಲ್ಲಿ ಎತ್ತುಗಳು ಖಾಲಿ ಗಾಡಿಯನ್ನ ಎಷ್ಟು ದೂರ ಎಳೆದುಕೊಂಡು ಹೋಗುತ್ತವೆ ಎನ್ನುವ ಆಧಾರದ ಮೇಲೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಯಿತು.