ಮದುವೆಗೆ ಕಿಲಾರಿ ಹೋರಿ ಸ್ಪೆಷಲ್ ಗೆಸ್ಟ್ ಗದಗ:ನಗರದ ಯುವಕನೋರ್ವ ತನ್ನ ಮದುವೆಗೆ ಹೋರಿಯೊಂದನ್ನು ಕರೆಸಿ ಗಮನ ಸೆಳೆದಿದ್ದಾನೆ. ಈ ಹೋರಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಅಂತಾರಾಜ್ಯ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದು ಹುಲಿಗಿನಕೊಪ್ಪದ 'ನಾಯಕ' ಎಂದೇ ಹೆಸರಾಗಿದೆ. ಹಾವೇರಿಯ ಕಿಲಾರಿ ಹೋರಿಗೆ ಮನಸೋತ ಗದುಗಿನ ಯುವಕ, ತನ್ನ ಮದುವೆ ಸಂದರ್ಭದಲ್ಲಿ ವಿಶೇಷ ಅತಿಥಿಯನ್ನು ಈ ಹೋರಿಯನ್ನು ಕರೆಸಿದ್ದಾನೆ.
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ನಾಯಕ ಈವರೆಗೆ 10ಕ್ಕೂ ಹೆಚ್ಚು ಬಹುಮಾನ ಪಡೆದಿದ್ದು, ಅಪಾರ ಪ್ರೀತಿ ಸಂಪಾದಿಸಿದೆ. ಹೋರಿಯ ಅಪ್ಪಟ ಅಭಿಮಾನಿಯೂ ಆಗಿರುವ ವರ, ತನ್ನ ಮದುವೆಗೆ ನಾಯಕನನ್ನು ಕರೆಸುವಂತೆ ಹೇಳಿದಾಗ ಮನೆಯವರು ಮೊದಲು ಅಚ್ಚರಿ ವ್ಯಕ್ತಪಡಿಸಿದ್ದರಂತೆ. ಆ ಬಳಿಕ ಒಪ್ಪಿಕೊಂಡು ಹೋರಿ ಕರೆಸಿ ಆದರಾತಿಥ್ಯ ನೀಡಿದ್ದಾರೆ.
ಶರವೇಗದ ಸರದಾರನ ಆಗಮನದಿಂದ ಮದುವೆ ಮಂಟಪದಲ್ಲಿ ಸಂಭ್ರಮ ಕಂಡುಬಂತು. ಬಂಧು-ಮಿತ್ರರು ಹೋರಿ ಜೊತೆಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಸಾಮಾನ್ಯವಾಗಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಭಾಗಿಯಾಗುವ ಹೋರಿಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಬೆಲೆ ಇರುತ್ತದೆ. ಇತ್ತೀಚಿಗೆ ವ್ಯಕ್ತಿಯೊಬ್ಬರು ನಾಯಕನನ್ನು ಕೊಳ್ಳಲು 15 ಲಕ್ಷ ರೂಪಾಯಿ ಬೇಡಿಕೆ ಇಟ್ಟರಂತೆ. ಆದರೆ, ಮಾಲೀಕ ಮಾರಾಟಕ್ಕೆ ಮನಸ್ಸು ಮಾಡದೇ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ. ತಮಿಳುನಾಡಿನಿಂದ 2 ಲಕ್ಷ ರೂಪಾಯಿ ನೀಡಿ ಖರೀದಿ ತಂದಿದ್ದ ಕಿಲಾರಿ ತಳಿಯ ಹೋರಿ ಇದಾಗಿದ್ದು ಇದೀಗ 15 ಲಕ್ಷ ರೂ. ಬೆಲೆ ಬಾಳುತ್ತಿದೆ.
ಇದನ್ನೂ ಓದಿ:ಮಂತ್ರಾಕ್ಷತೆ, ಮಾಂಗಲ್ಯಧಾರಣೆ ಇಲ್ಲ: ಸಂವಿಧಾನ ಸಾಕ್ಷಿಯಾಗಿ ಸರಳ ವಿವಾಹವಾದ ಜೋಡಿ
ಇತ್ತೀಚಿನ ವಿಭಿನ್ನ ಮದುವೆಗಳು..: ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ವೈದಿಕ ವಿಧಿ-ವಿಧಾನಗಳಿಲ್ಲದೆ, ಮಾಂಗಲ್ಯಧಾರಣೆಯೂ ಇಲ್ಲದೇ ಸಂವಿಧಾನವೇ ಸಾಕ್ಷಿ ಎಂದು ಸಂವಿಧಾನದ ಪುಸ್ತಕ ಹಿಡಿದು ನವಜೋಡಿ ಸರಳ ವಿವಾಹವಾಗಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಸಭಾ ಭವನದಲ್ಲಿ ಕಾರ್ಯಕ್ರಮ ಜರುಗಿತ್ತು. ಕಲಬುರಗಿಯ ಪೂಜಾ ಮತ್ತು ಗದಗದ ಸೋಮಶೇಖರ್ ಬಾಳಸಂಗಾತಿಗಳಾಗಿ ಹೊಸ ಬದುಕಿಗೆ ಹೆಜ್ಜೆ ಇಟ್ಟಿದ್ದರು. ಸಾಮಾಜಿಕ ಹೋರಾಟಗಾರ್ತಿ ಕೆ.ನೀಲಾ ಸಂವಿಧಾನ ಸಾಕ್ಷಿಯಾಗಿ ವಧು-ವರರಿಗೆ ಪ್ರತಿಜ್ಞೆ ಬೋಧಿಸಿದ್ದರು. ಅತಿಥಿಗಳಿಗೆ ವಚನ ಸಾಹಿತ್ಯದ ಪುಸ್ತಕಗಳನ್ನು ಉಡುಗೊರೆ ನೀಡಲಾಗಿತ್ತು.
ಹಾವೇರಿ ಜಿಲ್ಲೆಯ ಅಕ್ಕಿ ಆಲೂರು ಪಟ್ಟಣದಲ್ಲಿ ನಡೆದಿದ್ದ ವಿವಾಹ ಕಾರ್ಯಕ್ರಮವೊಂದರಲ್ಲಿ ಮದುವೆಗೆ ಬಂದಿದ್ದ ಬಂಧು-ಮಿತ್ರರು ಮತ್ತು ಸ್ನೇಹಿತರು ವಧು-ವರರಿಗೆ ಅಕ್ಷತೆ ಹಾಕಿದ ಬಳಿಕ ರಕ್ತದಾನ ಮಾಡಿದ್ದರು. ವಿಶೇಷವಾಗಿ ನವದಂಪತಿಯೇ ಖುದ್ದು ರಕ್ತದಾನ ಮಾಡಿ ಅರಿವು ಮೂಡಿಸಿದ್ದರು. ಈ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 50ಕ್ಕೂ ಅಧಿಕ ಮಂದಿ ರಕ್ತದಾನ ಮಾಡಿದ್ದರು.
ಇದನ್ನೂ ಓದಿ:ತಾಳಿ ಕಟ್ಟದೇ ಬೌದ್ಧ ಸಂಪ್ರದಾಯದ ಪ್ರಕಾರ ಹಸೆಮಣೆ ಏರಿದ ಜೋಡಿಗಳು
ಇತ್ತೀಚೆಗೆ ಗುಜರಾತ್‌ನ ಜುನಾಗಢದಲ್ಲಿ ಒಂಭತ್ತು ಜೋಡಿ ತಾಳಿ ಕಟ್ಟದೇ ಬೌದ್ಧ ಸಂಪ್ರದಾಯದ ಪ್ರಕಾರ ಹಸೆಮಣೆ ಏರಿದ್ದರು. ನವದಂಪತಿ ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಬುದ್ಧನ ಫೋಟೋಗಳನ್ನು ಹಿಡಿದು ಮದುವೆಯಾಗಿದ್ದರು. ಸಂವಿಧಾನದ ಪೀಠಿಕೆಯನ್ನು ಬೋಧಿಸುವ ಮೂಲಕ ಪ್ರಮಾಣವಚನ ಮಾಡಿಸಲಾಗಿತ್ತು.
ಇದನ್ನೂ ಓದಿ:ಮದುವೆ ಸಂಭ್ರಮದ ನಡುವೆ ವಧು-ವರ ಸೇರಿ 50 ಜನರಿಂದ ರಕ್ತದಾನ!