ಹಾವೇರಿ:ಉತ್ತರಕರ್ನಾಟಕದ ಪ್ರಮುಖ ಜಾನಪದ ಕ್ರೀಡೆಯೆಂದರೆ ಹೋರಿಬೆದರಿಸುವ ಸ್ಪರ್ಧೆ. ಈ ಸ್ಪರ್ಧೆಗಾಗಿ ಅನ್ನದಾತರು ಲಕ್ಷ ಲಕ್ಷ ಹಣ ನೀಡಿ ಹೋರಿಗಳನ್ನು ಸಾಕುತ್ತಾರೆ. ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ನಡೆಯುವ ಹೋರಿಬೆದರಿಸುವ ಸ್ಪರ್ಧೆಯಲ್ಲಿ ತಮ್ಮ ನೆಚ್ಚಿನ ಹೋರಿಗಳೊಂದಿಗೆ ರೈತರು ಪಾಲ್ಗೊಳ್ಳುತ್ತಾರೆ. ಇದಕ್ಕಾಗಿ ಜಿಲ್ಲೆಯ ರಾಣೆಬೆನ್ನೂರಿನ ಪ್ರಕಾಶ್ ಬುರಡಿಕಟ್ಟಿ ಎಂಬ ರೈತ ಕಳೆದ ಡಿಸೆಂಬರ್ನಲ್ಲಿ ತಮಿಳುನಾಡಿನಿಂದ ಸುಮಾರು 9 ಲಕ್ಷ ರೂಪಾಯಿ ಹಣ ನೀಡಿ ಹೋರಿಯನ್ನು ಖರೀದಿಸಿ ತಂದಿದ್ದಾರೆ.
ಹರ್ಷನ ನೆನಪಿಗೆ ಮರುನಾಮಕರಣ: ಹೋರಿಗೆ ರಾಣೆಬೆನ್ನೂರು ಕಾ ರಾಜಾ ಎಂದು ಹೆಸರಿಟ್ಟಿದ್ದಾರೆ. ಕಳೆದ ಆರು ತಿಂಗಳಿಂದ ಈ ಹೋರಿಯನ್ನು ಸ್ಪರ್ಧೆಗೆ ಬಿಡಲಾಗುತ್ತಿದೆ. ಈ ಹೋರಿಗೆ ಶಿವಮೊಗ್ಗದಲ್ಲಿ ಮೃತಪಟ್ಟ ಹಿಂದೂ ಹೋರಾಟಗಾರ ಹರ್ಷನ ಸವಿನೆನಪಿಗಾಗಿ ಹರ್ಷ ಎಂದು ಮರುನಾಮಕರಣ ಮಾಡಲಾಗಿದೆ. ಈ ಹೆಸರಿಟ್ಟ ನಂತರ ರಾಣೆಬೆನ್ನೂರು ಕಾ ರಾಜಾ ಹಿಂತಿರುಗಿ ನೋಡಿಲ್ಲಾ ಎನ್ನುತ್ತಾರೆ ಪ್ರಕಾಶ್. ಹರ್ಷನ ಹೆಸರು ಹೊತ್ತ ರಾಣೆಬೆನ್ನೂರು ಕಾ ರಾಜಾ ಇದೀಗ ಹೋರಿಬೆದರಿಸುವ ಸ್ಪರ್ಧೆಯಲ್ಲಿ ಇತಿಹಾಸ ಮಾಡುತ್ತಿದೆ ಎನ್ನುತ್ತಾರೆ ಹೋರಿಯ ಅಭಿಮಾನಿಗಳು. ಹರ್ಷನ ಹೆಸರಿಟ್ಟ ಈ ಹೋರಿ ಅಖಾಡಕ್ಕೆ ಇಳಿದರೆ ಸಾಕು ಎದುರಾಳಿಗಳು ಹಿಂದೆ ಸರಿಯುತ್ತಾರೆ. ಕೊಬ್ಬರಿ ಹರಿಯಲು ಬಂದ ಪೈಲ್ವಾನರು ಸಹ ಹೋರಿ ಹಿಡಿಯಲು ಒಂದು ಸಲ ಯೋಚನೆ ಮಾಡುತ್ತಾರೆ.
ರಾಣೆಬೆನ್ನೂರು ಕಾ ರಾಜಾ ಇದೀಗ ಹರ್ಷನ ಹೆಸರಲ್ಲಿ ಹೆಚ್ಚು ಪ್ರಸಿದ್ಧತೆ ಪಡೆದುಕೊಳ್ಳುತ್ತಿದೆ. ಹರ್ಷನ ಹೆಸರಿಟ್ಟ ಹೋರಿ ಏಳು ಸ್ಪರ್ಧೆಗಳಲ್ಲಿ ಸ್ಪರ್ಧಿಸಿದ್ದು, ಏಳರಲ್ಲೂ ಬಂಗಾರದ ಉಂಗುರ, ಗಣೇಶ ಲಾಂಚನ, ಬೈಕ್ ಚಕ್ಕಡಿ ಸೇರಿದಂತೆ ವಿವಿಧ ಬಹುಮಾನಗಳನ್ನು ತನ್ನದಾಗಿಸಿಕೊಂಡಿದೆ. ಹೋರಿಗೆ ಈ ರೀತಿ ಹೆಸರಿಟ್ಟಿರುವುದು ಹರ್ಷ ಅವರ ಕುಟುಂಬಕ್ಕೆ ಸಹ ಸಂತಸ ತಂದಿದೆ.