ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಬೆಳಗಾಲಪೇಟೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಮಾಜಿ ಸಿಎಂ ಯಡಿಯೂರಪ್ಪ ಪ್ರಚಾರ ನಡೆಸಿದರು.
ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ಈ ದೇಶಕ್ಕೆ ಅನ್ನ ಕೊಟ್ಟ ಅನ್ನದಾತನ ಬೆಳೆಗೆ ವೈಜ್ಞಾನಿಕ ಬೆಲೆ ಕೊಡುವುದು ಸೇರಿದಂತೆ ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಪ್ರಧಾನಿ ಮೋದಿಯವರ ಮತ್ತು ನಮ್ಮ ರಾಜ್ಯ ಸರ್ಕಾರದ ಉದ್ದೇಶ. ಅಕ್ಟೋಬರ್ 29ರವರೆಗೆ ಸತ್ಯಾಂಶದ ಅಂಕಿ - ಅಂಶಗಳನ್ನ ಮನೆಮನೆಗೆ ತಲುಪಿಸಿ.
ಹಾನಗಲ್ನಲ್ಲಿ ಬಿಜೆಪಿ ಅಭ್ಯರ್ಥಿ ಪರ ಯಡಿಯೂರಪ್ಪ ಭರ್ಜರಿ ಪ್ರಚಾರ ಕಾಂಗ್ರೆಸ್ಗೆ ಡಿಪಾಸಿಟ್ ಹೋಗಬೇಕು. ಆ ಕೆಲಸವನ್ನ ನೀವು ಮಾಡಿರಿ. ಬಹುತೇಕ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದರು. ಒಂದು ಕಾಲದಲ್ಲಿ ದೆಹಲಿಗೆ ಹೋಗಿ ಟಿಕೆಟ್ ತಂದರೆ ಗೆಲ್ಲೋದು ನೂರಕ್ಕೆ ನೂರು ನಿಶ್ಚಿತ ಅನ್ನೋ ಕಾಲವಿತ್ತು. ಅವರ ದುರಾಡಳಿತದಿಂದ ಬೇಸತ್ತು ಈಗ ಕೇವಲ 44 ಸಂಸದರಿದ್ದಾರೆ ಎಂದು ಹೇಳಿದರು.
ಈ ಎಲ್ಲ ಯೋಜನೆಗಳನ್ನು ಕೊಟ್ಟಿದ್ದು ನಿಮ್ಮ ಯಡಿಯೂರಪ್ಪ
ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರವಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಇಡೀ ಪ್ರಪಂಚ ಅಚ್ಚರಿಯಿಂದ ನೋಡ್ತಿದೆ. ನಿಮ್ಮ ಅಧಿಕಾರದ ಅವಧಿಯಲ್ಲಿ ನೀವು ಕೊಟ್ಟ ಕೊಡುಗೆ ಏನು? ನಿಮ್ಮ ಮನೆಯಲ್ಲಿ ಹುಟ್ಟುವ ಹೆಣ್ಣು ಮಗುವಿಗೆ ಭಾಗ್ಯಲಕ್ಷ್ಮಿ ಯೋಜನೆ ಮಾಡಿದ್ದು ನಿಮ್ಮ ಯಡಿಯೂರಪ್ಪ.
ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನ ಕೊಟ್ಟಿದ್ದು ನಿಮ್ಮ ಯಡಿಯೂರಪ್ಪ. ನಮ್ಮ ಕಾಂಗ್ರೆಸ್ನ ಸ್ನೇಹಿತರು ಹಣ, ಹೆಂಡ, ಅಧಿಕಾರದ ಬಲದಿಂದ ಚುನಾವಣೆ ಗೆಲ್ತಿದ್ರು. ಪ್ರಧಾನಿ ಮೋದಿಯವರ ಆಡಳಿತದ ಪರಿಣಾಮ ಎಲ್ಲಿದೆ ಕಾಂಗ್ರೆಸ್, ಎಲ್ಲಿದ್ದಾರೆ ನಿಮ್ಮ ನಾಯಕರು. ಎಲ್ಲೋ ಸ್ವಲ್ಪ ಕರ್ನಾಟಕದಲ್ಲಿ ಉಸಿರಾಡ್ತಿದೆ. ಅದಕ್ಕೆ ಧಿಮಾಕಿನಿಂದ ಮಾತಾಡ್ತಿದ್ದಾರೆ ಎಂದರು.
ಹಿಂದೆ ಜನ ಕಣ್ಣು ಮುಚ್ಚಿ ವೋಟು ಹಾಕುವ ಕಾಲವಿತ್ತು
ಒಂದು ಕಾಲದಲ್ಲಿ ಜನರು ಕಣ್ಣು ಮುಚ್ಚಿಕೊಂಡು ವೋಟ್ ಹಾಕುತ್ತಿದ್ದರು. ಇಲ್ಲಿರುವ ಬಹುತೇಕರು ಬಿಜೆಪಿಯ ಹಿತೈಷಿಗಳು, ಕಾರ್ಯಕರ್ತರೆ ಬಂದಿದ್ದೀರಿ. ಒಂದು ವಾರ ಪ್ರಧಾನಿ ಮೋದಿಯವರ ಕಾಣಿಕೆ, ಬೊಮ್ಮಾಯಿ ಅವರ ಸರ್ಕಾರದ ಕಾಣಿಕೆ ಏನು, ಯಡಿಯೂರಪ್ಪ ಕೊಟ್ಟ ಕಾಣಿಕೆ ಏನು ಅನ್ನೋದನ್ನ ಜನರಿಗೆ ತಿಳಿಸಬೇಕು.
ನೀವು ಮಾತ್ರವಲ್ಲ ನಿಮ್ಮ ಸುತ್ತಮುತ್ತಲಿನ ಜನರನ್ನ ಕರೆದುಕೊಂಡು ಬಂದು ಕಮಲದ ಗುರುತಿಗೆ ವೋಟು ಹಾಕಿ. ಈ ಭಾಗಕ್ಕೆ ಏನು ಬೇಕು ಅದೆಲ್ಲವನ್ನ ಸಿಎಂ ಉದಾಸಿ ಮಾಡಿಸಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಬೇಕಿದೆ, ಹಗುರವಾಗಿ ಮಾತನಾಡುವ ನಾಯಕರಿಗೆ ಪಾಠ ಕಲಿಸಬೇಕಿದೆ ಎಂದು ಹೇಳಿದರು.
ಸಂಸದ ಶಿವಕುಮಾರ್ಗೆ ಒಳ್ಳೆಯ ಭವಿಷ್ಯವಿದೆ: ಯಡಿಯೂರಪ್ಪ
ಸಂಸದ ಶಿವಕುಮಾರ ಉದಾಸಿಯವರಿಗೆ ಒಳ್ಳೆಯ ಭವಿಷ್ಯವಿದೆ. ನಾವು ಬಡತನದಿಂದ ಬಂದವರು. ನಮ್ಮ ತಾತ ತರಕಾರಿ ಮಾರಾಟ ಮಾಡ್ತಿದ್ದರು. ಹಣ್ಣು ಮಾರಾಟ ಮಾಡುತ್ತಿದ್ದೆ ನಾನು. ನಿಮ್ಮ ಆಶೀರ್ವಾದದಿಂದ ನಾಲ್ಕು ಬಾರಿ ಸಿಎಂ ಆದೆ.
30 ನೇ ತಾರೀಕಿಗೆ ನೀವು ಗುದ್ದಬೇಕು: BSY
ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಬೇಕು ಅಂದೆ. ಎಲ್ಲಿಯವರೆಗೂ ನಿಮ್ಮ ಪ್ರೀತಿ ವಿಶ್ವಾಸ ಇರುತ್ತೋ ಅಲ್ಲಿಯವರೆಗೆ ಸ್ಥಾನಮಾನ ಬೇಡ. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಬೇಕು. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಅಲ್ಲಿನ ಮುಖಂಡರ ಜೊತೆ ಚರ್ಚೆ ಮಾಡುವೆ. ಶಿವರಾಜ ಸಜ್ಜನರನ್ನ ಗೆಲ್ಲಿಸಿ. ಮುಂದೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನವರು ಚುನಾವಣೆಗೆ ನಿಲ್ತೇವೆ ಅಂದಿರಬಾರದು. ಮೂವತ್ತನೆ ತಾರೀಕಿಗೆ ನೀವು ಗುದ್ದಬೇಕು. ಕೌಂಟಿಂಗ್ ಆರಂಭ ಆಗ್ತಿದ್ದಂತೆ ಕಾಂಗ್ರೆಸ್ ನವರು ಜಾಗ ಖಾಲಿ ಮಾಡಬೇಕು. ಪ್ರಧಾನಿ ನರೇಂದ್ರ ಮೋದಿಯಂಥವರ ನಾಯಕತ್ವ ಸಿಕ್ಕಿರೋದು ನಮ್ಮ ಪುಣ್ಯ ಎಂದರು.