ಹಾವೇರಿ:ಜಿಲ್ಲಾಸ್ಪತ್ರೆಯಲ್ಲಿ ತೆರೆಯಲಾಗಿರೋ ಕೋವಿಡ್-19 ಆಸ್ಪತ್ರೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು.
ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬೊಮ್ಮಾಯಿ..! ನಂತರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳ ಹಿಂದೆ ಮುಂಬೈನಿಂದ ಬಂದಿದ್ದ ಮೂವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಮೂವರು ಸೋಂಕಿತರ ಜೊತೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದವರನ್ನ ಗುರುತಿಸಿ ಈಗಾಗಲೇ ಕ್ವಾರಂಟೈನ್ ಮಾಡಲಾಗಿದೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕ ಹೊಂದಿದ್ದ ಎಲ್ಲರ ವರದಿಗಳು ನೆಗೆಟಿವ್ ಆಗಿವೆ.
ಕೋವಿಡ್-19 ಕೆಲಸದಲ್ಲಿ ಗೃಹ ಇಲಾಖೆ, ಆರೋಗ್ಯ ಇಲಾಖೆ ಜೊತೆ ಸೇರಿ ಸಾಕಷ್ಟುಕೆಲಸ ಮಾಡ್ತಿದೆ. ಕೊರೊನಾ ವಾರಿಯರ್ಸ್ ಗಳಿಗೆ ಪಿಪಿಇ ಕಿಟ್ ವಿತರಿಸಲು ಆದೇಶ ಮಾಡಿದ್ದೇನೆ. ಅಲ್ಲದೇ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣದಲ್ಲಿನ ಸಂತ್ರಸ್ತೆಗೆ ಕೊರೊನಾ ಪಾಸಿಟಿವ್ ಆಗಿದೆ. ಹೀಗಾಗಿ ಸಂತ್ರಸ್ತೆ ಮತ್ತು ಆರೋಪಿಯನ್ನ ಕರೆದುಕೊಂಡು ಹೋಗಿ ಪಂಚನಾಮೆ ಮಾಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನ ಕ್ವಾರಂಟೈನ್ ಮಾಡಲಾಗಿದೆ.
ಪಂಚನಾಮೆಗೆ ಹೋಗಿದ್ದ ಅಧಿಕಾರಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದರಿಂದ ಡಿವೈಎಸ್ಪಿ ಸೇರಿದಂತೆ ಹಲವು ಸಿಬ್ಬಂದಿಗಳನ್ನ ಕ್ವಾರಂಟೈನ್ ಮಾಡಲಾಗುವುದು ಅಂತಾ ಸಚಿವ ಬೊಮ್ಮಾಯಿ ಹೇಳಿದ್ದಾರೆ.