ಹಾವೇರಿ:ವೈದ್ಯನೊಬ್ಬ ತನ್ನ ದೊಡ್ಡಮ್ಮನ ಮಗನನ್ನೇ ಕೊಂದು ಹಾಕಿ, ಬಳಿಕ ಏನು ಗೊತ್ತಿಲ್ಲದಂತೆ ನಟಿಸಿದ್ದ ಘಟನೆ ಹಾವೇರಿಯ ಸೋಮನಕಟ್ಟಿಯಲ್ಲಿ ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲದೆ ಪೊಲೀಸರು ಕೊಲೆ ವಿಷಯ ತಿಳಿಸುತ್ತಿದ್ದಂತೆ ಸಂಬಂಧಿಕರ ಜೊತೆ ಶವ ನೋಡಲು ಸಹ ಆ ವೈದ್ಯ ಬಂದಿದ್ದರು. ಹಾವೇರಿ ತಾಲೂಕಿನ ಸೋಮನಕಟ್ಟಿ ಗ್ರಾಮದ ಬಳಿ ಜು. 28 ರಂದು ಅನುಮಾನಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಶವವನ್ನ ನೋಡಿದ ಪೊಲೀಸ್ ಸಿಬ್ಬಂದಿ ಅಲ್ಲಿ ಸಿಕ್ಕ ಡ್ರೈವಿಂಗ್ ಲೈಸೆನ್ಸ್ ಮೇಲೆ ಆತ 26 ವರ್ಷದ ನವೀನ್ ರಾಥೋಡ್ ಎಂಬುದನ್ನು ಗುರುತಿಸಿದ್ದರು.
ನವೀನ್ ಮೂಲತಃ ಗದಗ ಜಿಲ್ಲೆಯವನಾಗಿದ್ದು, ತಂದೆ-ತಾಯಿ ಇಲ್ಲದ ಕಾರಣ ವಿಜಯನಗರ ಜಿಲ್ಲೆ ಹೂವಿನಹಡಗಲಿಯಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ವಾಸವಾಗಿದ್ದ ಎನ್ನಲಾಗ್ತಿದೆ. ಶವ ಪತ್ತೆಯಾಗುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಗುತ್ತಲ ಪೊಲೀಸರು ತನಿಖೆ ಕೈಗೊಂಡಿದ್ದರು. ಸಿಪಿಐ ನಾಗಮ್ಮ ಸೇರಿದಂತೆ ಪಿಎಸ್ಐ ಜಗದೀಶ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದರು. ಇದೀಗ ತನಿಖೆಯಲ್ಲಿ ನವೀನನ್ನು ಆತನ ಚಿಕ್ಕಮ್ಮನ ಮಗನೇ ಕೊಲೆ ಮಾಡಿರುವ ಅಂಶ ಬೆಳಕಿಗೆ ಬಂದಿದೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಸರ್ಕಾರಿ ಪ್ರಾಥಮಿಕ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿದ್ದ ಡಾ. ಚಿರಂಜೀವಿಯೇ ಕೊಲೆ ಆರೋಪಿ. ಆರೋಪಿ ಡಾ. ಚಿರಂಜೀವಿ ತಮ್ಮ ಸಹಾಯಕ ಪ್ರಶಾಂತ್ ಸಹಾಯದಿಂದ ಈ ಕೊಲೆ ಮಾಡಿದ್ದಾರೆ ಎಂಬ ಅಂಶ ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.