ಹಾವೇರಿ:ಜಿಲ್ಲಾಸ್ಪತ್ರೆಯಲ್ಲಿ 2006 ರಿಂದ ಆರಂಭವಾದ ರಕ್ತಭಂಡಾರ 2018ರಲ್ಲಿ ರಕ್ತವಿದಳನಾ ಕೇಂದ್ರವಾಗಿ ಮಾರ್ಪಟ್ಟಿದೆ. ಆರಂಭದಲ್ಲಿ ವಾರ್ಷಿಕ 1500 ಯುನಿಟ್ ರಕ್ತ ಸಂಗ್ರಹಿಸುತ್ತಿದ್ದ ರಕ್ತ ಭಂಡಾರ ಇದೀಗ ವಾರ್ಷಿಕ 7 ಸಾವಿರ ಯುನಿಟ್ ರಕ್ತ ಸಂಗ್ರಹಿಸಿ, ಹಲವಾರು ಜೀವ ರಕ್ಷಣೆಗೆ ಸಹಾಯಕವಾಗಿ ಕೆಲಸ ಮಾಡುತ್ತಿದೆ.
ಜಿಲ್ಲೆಯ ಜನರಲ್ಲಿ ರಕ್ತದಾನದ ಜಾಗೃತಿ ಮೂಡಿಸುವ ಮೂಲಕ ಮೂಢನಂಬಿಕೆ ಅವೈಜ್ಞಾನಿಕ ನಂಬಿಕೆಗಳನ್ನು ರಕ್ತಭಂಡಾರ ತೊಡೆದು ಹಾಕುತ್ತಿದೆ. ಇದರ ಪರಿಣಾಮ ವರ್ಷದಿಂದ ವರ್ಷಕ್ಕೆ ರಕ್ತದಾನ ಮಾಡುವವರ ಸಂಖ್ಯೆ ಅಧಿಕವಾಗುತ್ತಿದೆ. ಇದರ ಜೊತೆಗೆ ರಕ್ತದ ಬೇಡಿಕೆ ಸಹ ಹೆಚ್ಚಾಗುತ್ತಿದೆ. ಹಾವೇರಿ ರಕ್ತಭಂಡಾರ ಜಿಲ್ಲೆಯಲ್ಲಿ ಜನರಿಗೆ ವಾಟ್ಸಪ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ರಕ್ತದಾನದ ಮಹತ್ವ ಸಾರುತ್ತಿದೆ.
ರಕ್ತದಾನಿಗಳ ತವರೂರು ಎಂಬ ಖ್ಯಾತಿ:ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲಿ ರಕ್ತದಾನಪ್ರೇಮಿ ಕರಬಸಪ್ಪ ಗೊಂದಿ ಅವರು ಬ್ಲಡ್ ಆರ್ಮಿ ಸಂಘ ರಚಿಸಿಕೊಂಡಿದ್ದು, ಇದರ ಪರಿಣಾಮ ಅಕ್ಕಿಆಲೂರು ವಿಶ್ವದಲ್ಲಿಯೇ ರಕ್ತ ಸೈನಿಕರ ತವರೂರು ಎಂಬ ಖ್ಯಾತಿಗೆ ಪಾತ್ರವಾಗಿದೆ. ಹಾವೇರಿ ಜಿಲ್ಲಾಸ್ಪತ್ರೆ ಜೊತೆಗೆ ಇದೀಗ ಜಿಲ್ಲಾಕೇಂದ್ರದಲ್ಲಿ ವೈದ್ಯಕೀಯ ಕಾಲೇಜು ಕಾರ್ಯಾರಂಭ ಮಾಡಿದೆ. ಪರಿಣಾಮ ರಕ್ತಭಂಡಾರದ ಕಾರ್ಯ ಇನ್ನೂ ಅತ್ಯಾಧುನಿಕವಾಗಬೇಕಿದೆ. ಈಗ ಇರುವ ಆಧುನಿಕ ಸಲಕರಣಿಗಳ ಜೊತೆ ಇನ್ನಷ್ಟು ಅತ್ಯಾಧುನಿಕ ಸಲಕರಣಿ ಮತ್ತು ವಾಹನ ನೀಡಿದರೆ ರಕ್ತ ಸಂಗ್ರಹಕ್ಕೆ ಹೆಚ್ಚು ಅನುಕೂಲವಾಗುತ್ತೆ ಎನ್ನುತ್ತಾರೆ ಇಲ್ಲಿಯ ರಕ್ತಭಂಡಾರದ ತಾಂತ್ರಿಕ ಅಧಿಕಾರಿ ಬಸವರಾಜ್ ಕಮತದ.
ಮೊದ ಮೊದಲು ಹಾವೇರಿ ಜಿಲ್ಲೆಯಲ್ಲಿ ರಕ್ತದ ಅವಶ್ಯಕತೆ ಇದ್ದಾಗ ದೂರದ ಹುಬ್ಬಳ್ಳಿ, ದಾವಣಗೆರೆ ನಗರಗಳಿಗೆ ತೆರಳಬೇಕಿತ್ತು. ಆದರೆ ಜಿಲ್ಲಾಸ್ಪತ್ರೆಯಲ್ಲಿ ರಕ್ತಭಂಡಾರದ ಶ್ರಮದಿಂದಾಗಿ ಆ ಸಮಸ್ಯೆ ಇಲ್ಲದಂತೆ ಆಗಿದೆ. ಜೊತೆಗೆ ರಕ್ತಸಂಗ್ರಹ ಅಧಿಕವಾಗಿ ರಕ್ತದ ಅವಧಿ ಅಲ್ಪಾವಧಿಯಾಗಿದ್ದರೆ ಹಾವೇರಿ ರಕ್ತಭಂಡಾರದಿಂದ ಹುಬ್ಬಳ್ಳಿಯ ಕಿಮ್ಸ್ ರಕ್ತದಾನ ಹೆಚ್ಚುವರಿ ರಕ್ತ ನೀಡಿರುವ ಉದಾಹರಣೆಗಳು ಸಹ ಇವೆ.