ಪ್ರತಿಭಟನೆ ವೇಳೆ ಮಾಜಿ ಸಚಿವ ಬಿ ಸಿ ಪಾಟೀಲ್ ಮಾತನಾಡಿದರು. ಹಾವೇರಿ: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಭ್ರಷ್ಟ ಮತ್ತು ಅದಕ್ಷವಾಗಿದೆ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಆರೋಪಿಸಿದ್ದಾರೆ. ಬೆಳಗಾವಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ ಘಟನೆ ಖಂಡಿಸಿ ಹಾವೇರಿಯಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆಯಲ್ಲಿ ಸರ್ಕಾರ ಬೇಜವಾಬ್ದಾರಿ ವರ್ತನೆ ತೋರಿದ್ದು, ಇಡೀ ರಾಜ್ಯ ಸರ್ಕಾರ ಬೆತ್ತಲೆಯಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಹಿಳೆಯರ ಮೇಲೆ ನಿರಂತರ ದೌರ್ಜನ್ಯ ಪ್ರಕರಣ: ಭ್ರೂಣ ಹತ್ಯೆ ಸೇರಿದಂತೆ ವಿವಿಧ ಕೃತ್ಯಗಳಲ್ಲಿ ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಯಾಗುತ್ತಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿಹೋಗಿದೆ. ಮುಖ್ಯಮಂತ್ರಿಗಳು ಉಪಮುಖ್ಯಮಂತ್ರಿಗಳು ಮತ್ತು ಸಚಿವರು ದುಡ್ಡು ಮಾಡುವುದರಲ್ಲಿ ಕಾಂಪಿಟೇಶನಲ್ಲಿದ್ದಾರೆ. ಅವರವರಲ್ಲಿ ಯಾರು ಹೆಚ್ಚು ಹಣ ಮಾಡುವುದರ ಬಗ್ಗೆ ಕಾಂಪಿಟೇಶನ್ ನಡೆದಿದೆಯೇ ಹೊರತು ಅಭಿವೃದ್ದಿ ಶೂನ್ಯವಾಗಿದೆ ಎಂದು ಬಿ.ಸಿ.ಪಾಟೀಲ್ ಆರೋಪಿಸಿದರು.
ಸ್ಪಿಂಕ್ಲರ್ ಸೆಟ್‌ಗೆ ಈಗ 4200 ರೂ:ರಾಜ್ಯ ಸರ್ಕಾರ ರೈತ ವಿರೋಧಿಯಾಗಿದೆ. ಭ್ರಷ್ಣ ಸರ್ಕಾರದ ವಿರುದ್ದ ಬಿಜೆಪಿ ಪ್ರತಿಭಟನೆಗೆ ಇಳಿದಿದೆ. ನಾನು ಕೃಷಿ ಸಚಿವನಾಗಿದ್ದಾಗ ಒಂದು ಸ್ಪಿಂಕ್ಲರ್ ಸೆಟ್‌ಗೆ 1850 ರೂಪಾಯಿ ಇತ್ತು. ಇವತ್ತು ನಾಲ್ಕು ಸಾವಿರದ ಎರಡು ನೂರು ಮಾಡಿದ್ದು ಇದರಲ್ಲಿ ಏನೂ ಅವ್ಯವಹಾರ ನಡೀತಾ ಇದೆ. ರೈತರ ಮೇಲೆ ಭಾರ ಹಾಕಲಾಗುತ್ತಿದೆ ಎಂದು ಆರೋಪಿಸಿದರು.
ರೈತರ ಬಗ್ಗೆ ಕಾಳಜಿ ಇಲ್ಲ: ಸಿಎಂ ಸಿದ್ದರಾಮಯ್ಯ ಅವರು ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲದ ಅಸಲು ಕಟ್ಟಿದರೆ ಬಡ್ಡಿ ಮನ್ನಾ ಮಾಡುತ್ತೇವೆ ಎಂದು ಹೇಳಿದ್ದು, ರಾಜ್ಯದಲ್ಲಿ ಬರಗಾಲ ಇದೆ. ರೈತರು ಬದುಕು ಸಾಗಿಸುವುದೇ ಕಷ್ಟವಾಗಿದೆ. ಇಂತಹದರಲ್ಲಿ ರೈತರಿಗೆ ಸಾಲದ ಅಸಲು ಕಟ್ಟೀರಿ ಅಂದರೇ ಹೇಗೆ ಸಾಧ್ಯ ಎಂದು ಮಾಜಿ ಸಚಿವ ಬಿ ಸಿ ಪಾಟೀಲ್ ಪ್ರಶ್ನಿಸಿದರು.
ಸರ್ಕಾರಕ್ಕೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಸಂಪೂರ್ಣ ಮನ್ನಾ ಮಾಡಬೇಕಿತ್ತು. ಸಿಎಂ ಸಿದ್ದರಾಮಯ್ಯ ಸರ್ಕಾರ ರೈತರಿಗೆ ಭಿಕ್ಷೆ ಕೊಟ್ಟಂತೆ ಹೆಕ್ಟೇರ್‌ಗೆ ಎರಡು ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ. ನಾವು ಕಳೆದ ವರ್ಷ ಹೆಕ್ಟೇರಗೆ 13 ಸಾವಿರ ರೂಪಾಯಿ ಪರಿಹಾರ ನೀಡಿದ್ದೇವೆ ಎಂದು ಪಾಟೀಲ್ ತಿಳಿಸಿದರು.
25 ಸಾವಿರ 28 ಸಾವಿರದ ವರೆಗೆ ಬೆಳೆ ಹಾನಿ ಪರಿಹಾರ ನೀಡಿ ಸರ್ಕಾರ ನಡೆಸಿದ್ದೇವೆ. ರಾಜ್ಯ ಸರ್ಕಾರ ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸುತ್ತಿಲ್ಲ. ಭ್ರಷ್ಟಾಚಾರದಲ್ಲಿ ಮುಳುಗಿ ಅಭಿವೃದ್ದಿ ಕಾರ್ಯಗಳು ಕ್ಷೀಣಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿ ಆಗಿದೆ ಎಂದು ಆರೋಪಿಸಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಕರೆದ ಔತಣಕೂಟದಲ್ಲಿ ಬಿಜೆಪಿಯ ಎಸ್ ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್
ಮತ್ತು ವಿಶ್ವನಾಥ ಪಾಲ್ಗೊಂಡಿರುವ ಕುರಿತು ಅವರು ಮಾತನಾಡಿ, ಐದು ಬೆರಳುಗಳು ಸಮನಾಗಿರುವುದಿಲ್ಲ. ಈ ಕುರಿತಂತೆ ರಾಜ್ಯಾಧ್ಯಕ್ಷರು ಮೂವರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ. ಅವರು ಒಂದು ನಿರ್ಧಾರಕ್ಕೆ ಬರಬೇಕು, ಇರಬೇಕು ಇಲ್ಲವೇ ಹೋಗಬೇಕು. ದೇಹ ಇಲ್ಲಿ ಮನಸ್ಸು ಅಲ್ಲಿ ಎನ್ನುವುದು ದುರಾದೃಷ್ಟಕರ, ಪಕ್ಷಕ್ಕೆ ಸಹ ಮುಜುಗರವಾಗುತ್ತೆ. ಇರುವುದಾದರೇ ಇರಬೇಕು ಇಲ್ಲದಿದ್ದರೆ ಹೋಗಬೇಕು ಎಂದು ಪಾಟೀಲ್ ತಿಳಿಸಿದರು.
ಲೋಕಸಭೆ ಬಿಜೆಪಿ ಟಿಕೆಟ್‌ಗೆ ಲಾಭಿ ಮಾಡುವುದಿಲ್ಲ:ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ಗೆ ನಾನು ಲಾಭಿ ಮಾಡುವುದಿಲ್ಲ. ಪಕ್ಷ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಸಂಸತ್ ಮೇಲಿನ ದಾಳಿ ದುರಾದೃಷ್ಟಕರ ಪೂರ್ವನಿಯೋಜಿತ ಪ್ಲಾನ್ ಆಗಿದೆ. ಆ ಅಭೇದ್ಯ ಭದ್ರತೆ ದಾಟಿ ಒಳಗೆ ಹೋಗಿದ್ದಾರೆ ಎಂದರೆ ಇದರ ಹಿಂದೆ ವ್ಯವಸ್ಥಿತವಾದ ಸಂಚಿದೆ. ಈ ಕುರಿತು ತೀವ್ರ ತನಿಖೆಯಾಗಬೇಕು. ಅದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕು ಎಂದು ಬಿ ಸಿ ಪಾಟೀಲ್ ಒತ್ತಾಯಿಸಿದರು.
ಇದನ್ನೂಓದಿ:ಬೆಳಗಾವಿ ಮಹಿಳಾ ವಿವಸ್ತ್ರ ಘಟನೆ ಖಂಡಿಸಿ ಶಿವಮೊಗ್ಗದಲ್ಲಿ ಬಿಜೆಪಿ ಪ್ರತಿಭಟನೆ