ಹಾವೇರಿ:ಸಿಎಂ ಬಸವರಾಜ ಬೊಮ್ಮಾಯಿ ಅವರು ತಾವು ಪ್ರತಿನಿಧಿಸುವ ವಿಧಾನಸಭೆ ಕ್ಷೇತ್ರ ಶಿಗ್ಗಾಂವಿಯಲ್ಲಿ ಶನಿವಾರ ತಮ್ಮ ಜನ್ಮದಿನ ಆಚರಿಸಿಕೊಂಡರು. ಇಲ್ಲಿನ ಸಂತೆ ಮೈದಾನದಲ್ಲಿ ಕಾರ್ಯಕ್ರಮ ನಡೆಯಿತು. "ಇಷ್ಟು ದಿನದ ರಾಜಕೀಯ ಜೀವನದಲ್ಲಿ ನಾನೆಂದೂ ಸಾರ್ವಜನಿಕವಾಗಿ ಜನ್ಮದಿನ ಆಚರಿಸಿಕೊಂಡಿಲ್ಲ. ಆದರೆ ಇಂದು ಕ್ಷೇತ್ರದ ಜನರ ಅಭಿಮಾನದಿಂದಾಗಿ ಆಚರಿಸಿಕೊಳ್ಳುತ್ತಿದ್ದೇನೆ" ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಿಎಂ ಸ್ಥಳೀಯ ಮಠಾಧೀಶರಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಭಿಮಾನಿಗಳು ತಂದ 10ಕ್ಕೂ ಅಧಿಕ ಕೆಜಿ ಕೇಕ್‌ಗಳನ್ನು ತುಂಡರಿಸಿ ಸಂಭ್ರಮಿಸಿದರು. ಕ್ಷೇತ್ರದ ಜನರು ಸಿಎಂಗೆ ಕೇಕ್ ತಿನ್ನಿಸಿದರು.
"ನಿಮ್ಮ ಬೆಂಬಲ, ಆಶೀರ್ವಾದ ಮತ್ತು ಪ್ರಾಮಾಣಿಕ ಹಾರೈಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿ ವಿಶ್ವಾಸ ಕೊಟ್ಟಿದ್ದೀರಿ. ನ್ಯಾಯಸಮ್ಮತವಾಗಿ ನಡೆದುಕೊಂಡಿದ್ದೀರಿ. ಈ ಮಣ್ಣಿನ ಋಣವನ್ನು ನಾನು ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಮತ್ತೊಂದು ಜನ್ಮ ಇದ್ದರೆ ಅದು ಶಿಗ್ಗಾಂವಿಯಲ್ಲೇ ಆಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದು ಭಾವುಕರಾದರು.
ನನ್ನ ಜೀವನದ ಅಮೃತ ಗಳಿಗೆ: "ನನ್ನ ಜನ್ಮದಿನ ಆಚರಣೆಯಿಂದ ನೀವು ಪಡುತ್ತಿರುವ ಸಂತಸದಲ್ಲಿ ನಾನು ಸಂತೋಷವಾಗಿದ್ದೇನೆ. ಕಳೆದ ಒಂದೂವರೆ ವರ್ಷದಿಂದ ನಿಮ್ಮ ಜೊತೆ ಹೆಚ್ಚು ಕಾಲ ಕಳೆಯಲು ಸಾಧ್ಯವಾಗಿಲಿಲ್ಲ. ಈ ನೋವು ನನ್ನಲ್ಲಿದೆ. ಇದಕ್ಕಾಗಿ ಕ್ಷಮೆ ಕೋರುತ್ತೇನೆ. ಈ ಜನ್ಮದಿನ ಆಚರಣೆ ನನ್ನ ಜೀವನದ ಅಮೃತ ಗಳಿಗೆ. ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ತೆಗೆದುಕೊಂಡು ಹೋಗಲು ಶ್ರಮಿಸುತ್ತಿರುವ ನನಗೆ ನಿಮ್ಮ ಆಶೀರ್ವಾದ ಬೇಕು" ಎಂದರು.