ಹಾವೇರಿ:ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಬ್ಯಾಡಗಿ ಪೊಲೀಸರು ಬಂಧಿಸಿ, 13 ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 23 ವರ್ಷದ ಸಾಹಿಲ್ ಭಾಷಾಸಾಬ್ ಬಾವಿಕಟ್ಟಿ ಮತ್ತು ಮಹ್ಮದಸಾಧಿಕ್ ಸೈಫುಲ್ಲಾಸಾಬ್ ಆರೋಪಿಗಳೆಂದು ಗುರುತಿಸಲಾಗಿದೆ.
ಬೆಲೆಬಾಳುವ ಬೈಕ್‌ಗಳನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿಗಳು, ಯಾರೂ ಇಲ್ಲದೇ ಇರುವುದನ್ನು ಗಮನಿಸಿ ಕಳ್ಳತನ ಮಾಡುತ್ತಿದ್ದರು. ಬ್ಯಾಡಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೃತ್ಯ ಎಸಗಿದ್ದರು. ಈ ಕುರಿತಂತೆ ಹಲವು ಪ್ರಕರಣಗಳು ದಾಖಲಾಗಿದ್ದರಿಂದ ಬ್ಯಾಡಗಿ ಸಿಪಿಐ ಮಾಲತೇಶ ಲಂಬಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಪೊಲೀಸ್ ತಂಡಗಳು ಕಾರ್ಯಾಚರಣೆ ನಡೆಸಿ, ಕಳ್ಳರನ್ನು ಅರೆಸ್ಟ್ ಮಾಡಿದ್ದು, 8 ಲಕ್ಷ ಮೌಲ್ಯದ ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ದಾವಣಗೆರೆಯಲ್ಲಿ ಮನೆಗಳ್ಳರು ಪೊಲೀಸ್ ಬಲೆಗೆ:ಮನೆಗೆ ಬೀಗ ಜಡಿದು ಮಂಡಕ್ಕಿ ಬೋಂಡಾ ವ್ಯಾಪಾರ ಮಾಡಲು ತೆರಳಿದ್ದವರ ಮನೆಗೆ ಕನ್ನ ಹಾಕಿದ್ದ ಕಳ್ಳನನ್ನು ಪೊಲೀಸರು ಬಂಧಿಸಿ, 4.50 ಲಕ್ಷ ರೂ ಬೆಲೆ ಬಾಳುವ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಕಾಳಮ್ಮನ ಬೀದಿಯಲ್ಲಿರುವ ಮಾಲೀಕ ಮಂಜುನಾಥ್ ಮನೆಯಲ್ಲಿ ಅಕ್ಟೋಬರ್ 18ರಂದು ಕಳ್ಳತನ ಆಗಿತ್ತು. ಮಂಜುನಾಥ್ ಹಾಗೂ ಜ್ಯೋತಿ ದಂಪತಿ ಎಂದಿನಂತೆ ಮಂಡಕ್ಕಿ ಬೋಂಡಾ ವ್ಯಾಪಾರಕ್ಕೆಂದು ತಮ್ಮ ಮನೆಗೆ ಬೀಗ ಹಾಕಿಕೊಂಡು ವ್ಯಾಪಾರಕ್ಕೆ ತೆರಳಿದ್ದರು. ಇದನ್ನೇ ಕಾಯುತ್ತಿದ್ದ ಕಳ್ಳರು ಮಂಜುನಾಥ್ ಮನೆ ಬೀಗ ಮುರಿದು ಬೀರುವಿನಲ್ಲಿದ್ದ ಒಟ್ಟು 4,61,000 ರೂ ಬೆಲೆಯ 132 ಗ್ರಾಂ ಬಂಗಾರದ ಒಡವೆಗಳು ಸೇರಿದಂತೆ 15,000 ರೂ ಬೆಲೆಬಾಳುವ 250 ಗ್ರಾಂ ಬೆಳ್ಳಿ ಹಾಗೂ 01 ಲಕ್ಷ ನಗದು ಹಣ ದೋಚಿದ್ದರು. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ದೂರು ದಾಖಲಿಸಿದ್ದರು.