ಕರ್ನಾಟಕ

karnataka

ETV Bharat / state

ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ: ಬಸವರಾಜ್ ಗೊಬ್ಬಿ ಆರೋಪ

ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ವಿವಿಯ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್​ನ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಗೊಬ್ಬಿ ಆರೋಪ ಮಾಡಿದ್ದಾರೆ.

basavaraj-gobbi-alleged-scam-in-recruitment-of-folk-university-at-gotagodi
ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ: ಬಸವರಾಜ್ ಗೊಬ್ಬಿ ಆರೋಪ

By

Published : Jul 9, 2023, 6:56 PM IST

Updated : Jul 9, 2023, 7:08 PM IST

ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ಅಕ್ರಮ ಆರೋಪ

ಹಾವೇರಿ: ಜಿಲ್ಲೆಯ ಶಿಗ್ಗಾಂವಿ ತಾಲೂಕು ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ವಿವಿಯ ಸರ್ವಾಂಗೀಣ ಹಿತರಕ್ಷಣಾ ಟ್ರಸ್ಟ್ ಆರೋಪಿಸಿದೆ. ಈ ಕುರಿತಂತೆ ಟ್ರಸ್ಟ್​ನ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಗೊಬ್ಬಿ ಮಾತನಾಡಿ, ವಿವಿಯ ನೇಮಕಾತಿಯು ಅಕ್ರಮಗಳ ಕೂಪವಾಗಿದೆ. ವಿವಿಗೆ 2014 ರಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ಆಗಬೇಕಿತ್ತು. ಹಲವು ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ನೇಮಕಾತಿ ಮತ್ತೆ 2018 ರಲ್ಲಿ ಆರಂಭವಾಗಿತ್ತು. 2023ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದರು.

ನೇಮಕಾತಿಗೆ ಅರ್ಜಿ ಹಾಕಿದವರಲ್ಲಿ ವಿವಿಯಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಸಂಬಂಧಿಕರಿದ್ದಾರೆ. ಅವರ ನೇಮಕಾತಿಗೆ ಅನುಕೂಲವಾಗುವಂತೆ ಪ್ರಶ್ನೆ ಪತ್ರಿಕೆ ರಚಿಸಲಾಗಿದೆ. ಅಲ್ಲದೆ ಅವರಿಗೆ ಅನುಕೂಲವಾಗುವಂತೆ ಪರೀಕ್ಷಾ ಪ್ರವೇಶಪತ್ರ ಕಳಿಸಲಾಗಿದೆ. ಉಳಿದ ಅರ್ಜಿದಾರರಿಗೆ ಯಾವುದೇ ಪರೀಕ್ಷಾ ಪ್ರವೇಶಪತ್ರ ಸಿಗದಂತೆ ಮಾಡಲಾಗಿದೆ. ಕೆಲ ಅಭ್ಯರ್ಥಿಗಳಿಗೆ ಪರೀಕ್ಷೆ ಮುಗಿದ ನಂತರ ಪ್ರವೇಶ ಪತ್ರಗಳು ಮುಟ್ಟುವ ರೀತಿ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರಶ್ನೆಪತ್ರಿಕೆಗಳನ್ನ ಸಹ ಗುಣಮಟ್ಟದ ತಂಡ ಸಿದ್ಧಪಡಿಸಿಲ್ಲಾ, ಬದಲಿಗೆ ವಿವಿಯಲ್ಲಿರುವ ಕೆಳಹಂತದ ಅಧಿಕಾರಿಗಳು ಪ್ರಶ್ನೆಪತ್ರಿಕೆ ರಚಿಸಿದ್ದಾರೆ. ಉತ್ತರ ಪ್ರತಿಗಳಿಗೆ ಅಂಕಗಳ ನೀಡುವಿಕೆ, ಸಂದರ್ಶನ ಸೇರಿದಂತೆ ಹಲವು ಕಡೆ ಅಕ್ರಮ ನಡೆದಿದೆ. ರಾಜ್ಯಪಾಲರು ಈ ಕುರಿತಂತೆ ಶೀಘ್ರ ಕ್ರಮ ಕೈಗೊಳ್ಳಬೇಕು. ಲೋಕಾಯುಕ್ತ, ಎಸಿಬಿ ಅಥವಾ ಸಿಬಿಐ ತನಿಖೆಗೆ ಒಳಪಡಿಸಬೇಕು ಎಂದು ಅಧ್ಯಕ್ಷ ಬಸವರಾಜ್ ಗೊಬ್ಬಿ ಆಗ್ರಹಿಸಿದರು.

ಈ ರೀತಿ ಆರೋಪ ಮಾಡಿದ ತಮ್ಮ ಮೇಲೆ ವಿವಿಯ ಅಧಿಕಾರಿಗಳು ಮಾನನಷ್ಟ ಮೊಕದ್ದಮೆ ಹಾಕಲು ಸಿದ್ಧರಾಗಿದ್ದಾರೆ. ಅಲ್ಲದೆ ಈ ಕುರಿತಂತೆ ನ್ಯಾಯಾಲಯದಿಂದ ನೋಟಿಸ್ ಸಹ ನೀಡಿದ್ದಾರೆ. ನಮ್ಮ ಸಂಘಟನೆ ನ್ಯಾಯಸಮ್ಮತವಾಗಿದ್ದು, ಎಲ್ಲ ರೀತಿಯ ಕಾನೂನು ಕ್ರಮಗಳನ್ನ ಅಳವಡಿಸಿಕೊಂಡಿದೆ ಎಂದು ಬಸವರಾಜ್ ಗೊಬ್ಬಿ ಸ್ಪಷ್ಟಪಡಿಸಿದರು.

ಇದೇ ವೇಳೆ ಮಾತನಾಡಿದ ಸಂಘದ ನ್ಯಾಯವಾದಿ ಬಸನಗೌಡ ಜೇಕಿನಕಟ್ಟಿ, ವಿವಿಯ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮ ನಡೆದಿದೆ. ಒಂದೊಂದು ಹುದ್ದೆಗೆ 90 ಲಕ್ಷ, 60 ಲಕ್ಷ ಮತ್ತು 30 ಲಕ್ಷ ರೂಪಾಯಿ ಲಂಚ ಪಡೆಯಲಾಗಿದೆ. ಉನ್ನತ ಹುದ್ದೆಗೆ 90 ಲಕ್ಷ ಪಡೆದರೆ ಕ್ಲರ್ಕ್​​ ಹುದ್ದೆಗೆ 30ಲಕ್ಷ ರೂಪಾಯಿ ಲಂಚ ಪಡೆಯಲಾಗಿದೆ ಎಂದು ಆರೋಪಿಸಿದರು. ಈ ಕುರಿತಂತೆ ಜಾನಪದ ವಿವಿ ಕಚೇರಿಗೆ ಹೋದರೆ ಅವರಿಗೆ ಅವಮಾನ ಮಾಡಲಾಗುತ್ತದೆ ಎಂದು ಬಸನಗೌಡ ಆರೋಪಿಸಿದರು.

ಇಷ್ಟಾದರೂ ಸರ್ಕಾರ ಈ ಕುರಿತಂತೆ ಸರಿಯಾದ ತನಿಖೆಗೆ ಆದೇಶಿಸಿಲ್ಲ. ಸರ್ಕಾರಕ್ಕೆ ಸಹ ವಿಶ್ವವಿದ್ಯಾಲಯದ ಸಿಬ್ಬಂದಿ ತಪ್ಪು ಸಂದೇಶ ನೀಡಿ ಮೋಸ ಮಾಡಿದ್ದಾರೆ. ರಾಜ್ಯಪಾಲರು ಹಾಗೂ ಉನ್ನತ ಶಿಕ್ಷಣ ಸಚಿವರು ಈ ಕೂಡಲೇ ನೇಮಕಾತಿ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಮತ್ತು ಯೋಗ್ಯತೆ ಇರುವ ಅಭ್ಯರ್ಥಿಗಳಿಗೆ ಜಾನಪದ ವಿಶ್ವವಿದ್ಯಾಲಯದಲ್ಲಿ ಕೆಲಸ ಸಿಗಬೇಕು ಎಂದು ಬಸನಗೌಡ ಸರ್ಕಾರಕ್ಕೆ ಒತ್ತಾಯಿಸಿದರು.

ಇದನ್ನೂ ಓದಿ:ಹಾವೇರಿ ರಕ್ತ ಭಂಡಾರದಿಂದ ರಕ್ತದಾನದ ಜಾಗೃತಿ.. ಹೆಚ್ಚಾದ ರಕ್ತದಾನಿಗಳ ಸಂಖ್ಯೆ.. ವಾರ್ಷಿಕ 7 ಸಾವಿರ ಯುನಿಟ್ ಬ್ಲಡ್​ ಸಂಗ್ರಹಣೆ

Last Updated : Jul 9, 2023, 7:08 PM IST

ABOUT THE AUTHOR

...view details