ಹಾವೇರಿ:ಈ ಹಿಂದೆ ನಾವು ನಿಜಲಿಂಗಪ್ಪನವರನ್ನ, ಜೆ. ಹೆಚ್. ಪಟೇಲ್ರನ್ನು ನಂಬಿರಲಿಲ್ಲ. ಆದರೆ, ಬೊಮ್ಮಾಯಿಯವರನ್ನು ಅಷ್ಟೊಂದು ನಂಬಿದ್ದೇವೆ. ಬೊಮ್ಮಾಯಿ ಅವರೇ ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇವೆ ಎಂದು ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವ ವಿಚಾರದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪಂಚಮಸಾಲಿ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಅಸಮಾಧಾನ ಹೊರಹಾಕಿದ್ದಾರೆ.
ಜಿಲ್ಲೆಯ ರಟ್ಟೀಹಳ್ಳಿ ಪಟ್ಟಣದಲ್ಲಿ ಮಾತನಾಡಿದ ಶ್ರೀಗಳು, 12 ನೇ ಶತಮಾನದಲ್ಲಿ ಬಸವಣ್ಣನವರ ಮೇಲೆ ಲಿಂಗಾಯತರು ನಂಬಿಕೆ ಇಟ್ಟಷ್ಟು ನಂಬಿಕೆಯನ್ನು ಸಿಎಂ ಮೇಲೆ ಇಟ್ಟಿದ್ದೇವೆ. ನಂಬಿಕೆ, ವಿಶ್ವಾಸಕ್ಕೆ ಯಾವುದೇ ಕಾರಣಕ್ಕೂ ಕಳಂಕ ತರಬೇಡಿ ಎಂದು ಮನವಿ ಮಾಡಿದರು. ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವುದರಿಂದ ನಿಮಗೆ ಏನಾದರೂ ತೊಂದರೆ ಆಗುವುದಾದರೆ, ಯಾರಿಂದಾದರೂ ಒತ್ತಡವಿದ್ದರೆ ಬಹಿರಂಗವಾಗಿ ಹೇಳಿ ಎಂದರು.
ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಅವರು ನಮಗೆ ಕೈಕೊಟ್ಟರು. ಈಗ ಬೊಮ್ಮಾಯಿ ಅವರೂ ಕೈಕೊಟ್ಟರು ಎಂದು ಹೇಳಬೇಕಷ್ಟೆ. ಮುಂದಿನ ದಿನಗಳಲ್ಲಿ ಭಗವಂತ ಶಕ್ತಿಕೊಟ್ಟರೆ ಹೋರಾಟ ಮಾಡುತ್ತೇವೆ. ಈ ಹಿಂದೆ ನಿಮ್ಮ ತಂದೆ ಹಾಗೂ ಈಗ ನೀವು ಸಿಎಂ ಆಗುವುದಕ್ಕೆ ನಮ್ಮ ಸಮಾಜದ ದೊಡ್ಡ ಆಶೀರ್ವಾದವಿದೆ. ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಶ್ರೀಗಳು ಒತ್ತಾಯಿಸಿದರು.
ಮೀಸಲಾತಿ ವಿಚಾರದಲ್ಲಿ ಸರ್ಕಾರದ ವಿಳಂಬ ಧೋರಣೆಯನ್ನು ನಾವು ಸಹಿಸುವುದಿಲ್ಲ. ನಮ್ಮ ಸಮಾಜಕ್ಕೆ 2ಎ ಮೀಸಲಾತಿಯ ಎಲ್ಲ ಹೋರಾಟಕ್ಕೂ ಸಿಎಂ ಬೊಮ್ಮಾಯಿ ಸ್ಪಂದಿಸಿದ್ದಾರೆ. ಡಿಸೆಂಬರ್ 16ರಂದು ಕಾಲು ನೋವಿದ್ದರೂ ಕೂಡ ಬೆಳಗಾವಿಯಲ್ಲಿ ನಡೆದ ನಮ್ಮ ಸಮಾಜದ ಎಲ್ಲ ಪಕ್ಷಗಳ ಶಾಸಕರ ಸಭೆಗೆ ಅವರು ಬಂದು ಭರವಸೆ ಕೊಟ್ಟಿದ್ದರು. ಬಜೆಟ್ ಅಧಿವೇಶನದ ಒಳಗಾಗಿ ಸಮಾಜಕ್ಕೆ ಮೀಸಲಾತಿ ಕೊಡುತ್ತೇನೆಂದು ನಮ್ಮ ಸಮಾಜದ ಶಾಸಕರು, ಸಚಿವರಿಗೆ ಸಿಎಂ ಮಾತು ಕೊಟ್ಟಿದ್ದರು. ಮೀಸಲಾತಿ ವಿಚಾರದಲ್ಲಿ ಕಳೆದೆರಡು ತಿಂಗಳಿಂದ ಸಿಎಂ ಬೊಮ್ಮಾಯಿಯವರು ಸ್ಪಷ್ಟತೆ ತೋರಿಸುತ್ತಿಲ್ಲ ಎಂದರು.