ಹಾವೇರಿ : ಸ್ವಾಮೀಜಿಗಳು ಸನಾತನ ಧರ್ಮ ಉಳಿಸುವ ಕೆಲಸ ಮಾಡಬೇಕು. ಆದರೆ, ಇಂದು ಅನೇಕರು ಸಚಿವರ ಮನೆ ಸುತ್ತುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದರು. ಹಾವೇರಿ ಕಾ ರಾಜಾ ಗಣೇಶೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೆಡಿಕಲ್ ಕಾಲೇಜ್, ಇಂಜಿನಿಯರಿಂಗ್ ಕಾಲೇಜ್ ಕಟ್ಟಿಸಿಕೊಡಲು ಸ್ವಾಮೀಜಿಗಳು ಓಡಾಡುತ್ತಿದ್ದಾರೆ. ಆದರೆ, ಸನಾತನ ಧರ್ಮ ಉಳಿಸುವ ಕೆಲಸ ಮಾಡುತ್ತಿಲ್ಲ. ಧರ್ಮ ಉಳಿಸುವ ಕೆಲಸ ಮಾಡಬೇಕಾದವರು ಸಚಿವ ಮಾಡಿ, ಮುಖ್ಯಮಂತ್ರಿ ಮಾಡಿ ಅಂತಾ ಲಾಬಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಭಾರತ ಎಂದು ಕರೆದರೆ ಕೆಲವರಿಗೆ ನೋವಾಗುತ್ತದೆ. ಭರತದಿಂದ ಭಾರತ ಆಗಿದೆ. ಇಂಡಿಯಾ ಅಂತಾ ಹೆಸರು ಇಟ್ಟವರು ಬ್ರಿಟಿಷರು, ನೀವು ಭಾರತೀಯರ? ಅಥವಾ ಬ್ರಿಟಿಷರಿಗೆ ಹುಟ್ಟಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ನಾವು ಚಂದ್ರನ ಮೇಲೆ ತ್ರಿವಣ ಧ್ವಜ ಹಾರಿಸಿದ್ದೇವೆ. ತಿನ್ನುವ ಅನ್ನ ಮತ್ತು ಕುಡಿಯುವ ನೀರು ಭಾರತದ್ದು, ಮತ್ತೆ ಪಾಕಿಸ್ತಾನಕ್ಕೆ ಜೈ ಅಂತಿರಾ? ಎಂದು ಪ್ರಶ್ನಿಸಿದರು.
ಗಣೇಶ ಉತ್ಸವ ಮಾಡುವುದಕ್ಕೆ ಪರವಾನಿಗೆ ಪಡೆಯುವ ಪರಿಸ್ಥಿತಿ ಇದೆ. ಡಿಜೆ ಹಚ್ಚುವಾಗ ಶಬ್ದಕ್ಕೆ ಇಂತಿಷ್ಟೇ ಮಿತಿ ಇರಬೇಕು. ಸಮಯ ಇಂತಿಷ್ಟೇ ಇರಬೇಕು. ಇಷ್ಟೆಲ್ಲಾ ಮಿತಿ ಹಾಕೋಕೆ ಇದೇನು ಪಾಕಿಸ್ತಾನನಾ?. ನಾವು ವರ್ಷಕ್ಕೊಮ್ಮೆ ಹಬ್ಬ ಮಾಡ್ತೀವಿ. ನಮಗೆ ರೂಲ್ಸ್ ಹಾಕ್ತೀರಾ? ನಾನು ಈ ಹಿಂದೆ ಸ್ವತಂತ್ರವಾಗಿ ಪರಿಷತ್ ಸ್ಥಾನಕ್ಕೆ ಆಯ್ಕೆ ಆಗಿದ್ದೆ. ಯಾಕೆಂದರೆ ನಮ್ಮಲ್ಲೂ ಕೆಲವು ಸಲ ನಮ್ಮಂತವರಿಗೆ ಟಿಕೆಟ್ ಕೊಡಲ್ಲ. ಯಾಕೆಂದರೆ, ವಂಶ ಬೆಳೆಸಬೇಕಲ್ಲ, ಮಕ್ಕಳಿಗೆ ಮೊಮ್ಮಕ್ಕಳಿಗೆ ಅಧಿಕಾರ ಕೊಡಬೇಕಲ್ಲ. ಹೀಗಾಗಿ, ನಮ್ಮಲ್ಲೂ ಕೆಲವು ಸಲ ನಮಗೆ ಟಿಕೆಟ್ ಕೊಡಲ್ಲ. ನನನ್ನು ಎರಡೇ ತಿಂಗಳು ಗೃಹ ಸಚಿವನಾಗಿ ಮಾಡಿ ನೋಡಿ. ಉತ್ತರ ಪ್ರದೇಶದ ರೀತಿ ಕರ್ನಾಟಕ ಮಾಡುತ್ತೇನೆ ಎಂದರು.
ಇದನ್ನೂ ಓದಿ :ಹತಾಶೆ ಮನೋಭಾವನೆಯಿಂದ ಯತ್ನಾಳ್ ಹೇಳಿಕೆ ನೀಡುತ್ತಿದ್ದಾರೆ : ಈಶ್ವರ್ ಖಂಡ್ರೆ ವಾಗ್ದಾಳಿ