ಹಾವೇರಿ:ಇಲ್ಲಿನ ಬಮ್ಮನಕಟ್ಟಿ ಗ್ರಾಮದಲ್ಲಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿನ ಶಿಕ್ಷಕರು ಮಕ್ಕಳಿಗಾಗಿ ಶಾಲೆಯಲ್ಲಿಯೇ ಬ್ಯಾಂಕ್ ವ್ಯವಸ್ಥೆ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಬ್ಯಾಂಕ್ ವ್ಯವಹಾರದ ಜ್ಞಾನ ಸಿಗಲಿ ಎಂಬ ಕಾರಣಕ್ಕೆ ಸ್ಕೂಲ್ ಬ್ಯಾಂಕ್ ತೆರೆಯಲಾಗಿದೆ.
ಹಾವೇರಿ ತಾಲೂಕಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಆಟ, ಪಾಠದ ಜೊತೆಗೆ ಸಾಮಾನ್ಯ ಜ್ಞಾನವನ್ನೂ ಶಿಕ್ಷಕರು ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಕಲಿತ ಜ್ಞಾನ ಜೀವನದುದ್ದಕ್ಕೂ ಶಾಶ್ವತವಾಗಿ ನೆಲೆ ನಿಲ್ಲುತ್ತದೆ ಎಂಬುದು ಇದರ ಹಿಂದಿನ ಉದ್ದೇಶ. ಪ್ರಾಧ್ಯಾಪಕರ ಕಾರ್ಯಕ್ಕೆ ಶಾಲಾ ಸುಧಾರಣಾ ಸಮಿತಿ ಮತ್ತು ಗ್ರಾಮಸ್ಥರ ಒಪ್ಪಿಗೆಯೂ ಸಿಕ್ಕಿದೆ.
ವಿದ್ಯಾರ್ಥಿಗಳಿಗೆ ಬ್ಯಾಂಕ್ ಖಾತೆ: ಈ ಶಾಲೆಯಲ್ಲಿ ಒಟ್ಟು 204 ವಿದ್ಯಾರ್ಥಿಗಳಿದ್ದಾರೆ. 80 ವಿದ್ಯಾರ್ಥಿಗಳು ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ತೆರೆದಿದ್ದಾರೆ. ಖಾತೆ ಹೊಂದಿದ ಖಾತೆದಾರರಿಗೆ ಭಾವಚಿತ್ರ ಇರುವ ಪಾಸ್‌ಬುಕ್ ನೀಡಲಾಗಿದೆ. ಬ್ಯಾಂಕ್‌ನಲ್ಲಿ ಶಾಲೆಯ ವಿದ್ಯಾರ್ಥಿಗಳೇ ಕ್ಯಾಷಿಯರ್ ಮತ್ತು ಮ್ಯಾನೇಜರ್ ಆಗಿದ್ದಾರೆ. ಪ್ರತಿ ಸೋಮವಾರ ಮತ್ತು ಗುರುವಾರ ಮಧ್ಯಾಹ್ನ 3.30 ರಿಂದ 4.30 ರವರೆಗೆ ಬ್ಯಾಂಕ್ ಕಾರ್ಯನಿರ್ವಹಿಸುತ್ತದೆ.
ಈ ಸಮಯದಲ್ಲಿ ವಿದ್ಯಾರ್ಥಿಗಳು ಹಣ ಕಟ್ಟುವುದಾಗಲೀ ಅಥವಾ ಹಣ ಬಿಡಿಸಿಕೊಳ್ಳುವ ಕೆಲಸ ಮಾಡುತ್ತಾರೆ. ತಮ್ಮ ತಂದೆ ತಾಯಿ ನೀಡಿದ ಹಣವನ್ನು ಬ್ಯಾಂಕ್‌ನಲ್ಲಿರಿಸಿ, ತಮಗೆ ಬೇಕಾದಾಗ ವಾಪಸ್ ಪಡೆಯುತ್ತಾರೆ. ಸುಮಾರು 50 ಸಾವಿರ ರೂ.ಯಷ್ಟು ವ್ಯವಹಾರವನ್ನು ಬ್ಯಾಂಕ್ ಮಾಡುತ್ತಿದೆ. ಬ್ಯಾಂಕ್‌ನಲ್ಲಿ ಹಣ ಡಿಪಾಸಿಟ್ ಮತ್ತು ಕ್ಯಾಶ್ ಪಡೆಯಲು ಬಳಸುವ ಅರ್ಜಿಗಳನ್ನೇ ಇಲ್ಲಿಯೂ ಬಳಸಲಾಗುತ್ತಿದೆ.