ಹಾವೇರಿ:ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವಿಚಾರದ ಬಗ್ಗೆ ಹಾವೇರಿ ಜಿಲ್ಲೆ ಹಿರೇಕೆರೂರಿನ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಪ್ರತಿಕ್ರಿಯಿಸಿದ್ದಾರೆ.
ಯಡಿಯೂರಪ್ಪನವರಿಗೂ ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ, ರಾಜಕೀಯ ಉದ್ದೇಶಕ್ಕಾಗಿ ಕಾಂಗ್ರೆಸ್ ಹಾಗು ಜೆಡಿಎಸ್ ನಾಯಕರು ನಾಟಕ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ರು.
ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾವು ಯಡಿಯೂರಪ್ಪನವರನ್ನು ನ್ಯಾಯಾಲಯದಲ್ಲಿ ಪಾರ್ಟಿ ಮಾಡಿಲ್ಲ. ನಾವು ಪಾರ್ಟಿ ಮಾಡಿದ್ದು ಸ್ಪೀಕರ್ ಅವರನ್ನಷ್ಟೇ. ಈ ವಿಚಾರದ ಹೊರತಾಗಿ ನಾವು ತಲೆಕೆಡಿಸಿಕೊಳ್ಳೋ ಅಗತ್ಯವಿಲ್ಲ ಎಂದು ಬಿ.ಸಿ ಪಾಟೀಲ್ ಹೇಳಿದ್ರು.
ಸ್ಪೀಕರ್ ಅವರಿಂದ ನಮಗೆ ಅನ್ಯಾಯ ಆಗಿದೆ ಎಂದು ನಾವು ಕೋರ್ಟ್ ಮೊರೆ ಹೋಗಿದ್ದೇವೆ. ಕೋರ್ಟ್ ತೀರ್ಮಾನಕ್ಕೂ ಮುನ್ನ ಯಾರ್ಯಾರೋ ಏನೇನೋ ಮಾತಾಡಿದ್ರೆ ನಮಗೇನು ಸಂಬಂಧವಿಲ್ಲ. ಈ ಬಗ್ಗೆ ಯಾರೋ ಎಲ್ಲೋ ಮಾತಾಡಿದ್ದು ಸಾಕ್ಷ್ಯ ಆಗುತ್ತಾ? ಇದೆಲ್ಲ ರಾಜಕೀಯ ಕ್ರೆಡಿಟ್‌ಗಾಗಿ ಕಾಂಗ್ರೆಸ್, ಜೆಡಿಎಸ್‌ನವರು ಮಾಡ್ತಿರೋ ನಾಟಕ ಅಂತ ಪಾಟೀಲ್ ಅಭಿಪ್ರಾಯ ಪಟ್ಟರು.
ಮೈತ್ರಿ ಸರ್ಕಾರ ಬೀಳಲು ಮಾಜಿ ಸಿಎಂ ಸಿದ್ದರಾಮಯ್ಯ ಕಾರಣರಲ್ಲ. ಕಾಂಗ್ರೆಸ್ ಜೆಡಿಎಸ್‌ನ ವ್ಯವಸ್ಥೆ ಕಾರಣ ಎಂದು ಹೇಳಿದ ಅವರು, ಕುಮಾರಸ್ವಾಮಿ ಆಡಳಿತದಲ್ಲಿ ಅಧಿಕಾರ ಕೇವಲ ಡಿಕೆಶಿ, ದಿನೇಶ್ ಗುಂಡೂರಾವ್ ಹಾಗು ಕುಮಾರಸ್ವಾಮಿ ಕುಟುಂಬಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಟೀಕಿಸಿದರು.
ದಿನೇಶ್ ಗುಂಡೂರಾವ್ಗೆ ವಸ್ತುಸ್ಥಿತಿಯ ಬಗ್ಗೆ ಗೊತ್ತಿಲ್ಲ. ಹತ್ತು ವರ್ಷದಿಂದ ನಾನು ಕಾಂಗ್ರೆಸ್‌ನಲ್ಲಿದ್ದೆ. ಪಕ್ಷದಲ್ಲಿ ನಮ್ಮನ್ನೆಲ್ಲ ಕೂಲಿಗಳ ರೀತಿ ಬಳಸಿಕೊಂಡ್ರು. ಕುಮಾರಸ್ವಾಮಿ ಊಸರವಳ್ಳಿ ಇದ್ದ ಹಾಗೆ. ಅವರು ಯಾವಾಗ ಯಾವ ರೀತಿ ಬಣ್ಣ ಬದಲಿಸ್ತಾರೆ ಗೊತ್ತಾಗೋಲ್ಲ ಎಂದು ವ್ಯಂಗ್ಯವಾಡಿದ್ರು.