ಹಾವೇರಿ: ಭಾರತ ದೇಶ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಿಸುತ್ತಿದೆ. ಈ ಸಂಭ್ರಮಕ್ಕೆ ಕಾರಣರಾದವರು ಲೆಕ್ಕವಿಲ್ಲದಷ್ಟು ಸ್ವಾತಂತ್ರ್ಯ ಹೋರಾಟಗಾರರು. ಇಂತಹ ವೀರಪುತ್ರರ ಪೈಕಿ ಜಿಲ್ಲೆಯ ಮೈಲಾರ ಮಹಾದೇವಪ್ಪ ಕೂಡಾ ಒಬ್ಬರು. ಉಪ್ಪಿನ ಸತ್ಯಾಗ್ರಹದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ್ದ ಇವರು ನಂತರ ಬ್ರಿಟಿಷರಿಗೆ ಸಿಂಹಸ್ವಪ್ನರಾಗಿದ್ದರು.
ಮೈಲಾರ ಮಹಾದೇವಪ್ಪ ಹೋರಾಟ: ಜಿಲ್ಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದವರು ಮೈಲಾರ ಮಹಾದೇವಪ್ಪ. ಇವರಿಂದ ಸ್ಫೂರ್ತಿ ಪಡೆದು ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಜಿಲ್ಲೆಯಲ್ಲಿ ಹುಟ್ಟಿಕೊಂಡಿದ್ದರು. ಇಂತಹ ಮಹಾನ್ ಚೇತನ 1943 ಏಪ್ರಿಲ್ 1ರಂದು ನಡೆದ ಬ್ರಿಟಿಷರ ಗುಂಡಿನ ದಾಳಿಗೆ ಎದೆಯೊಡ್ಡಿ ಹುತಾತ್ಮರಾದರು. ಇವರ ಪಾರ್ಥಿವ ಶರೀರವನ್ನು ಹಾವೇರಿ ಹೊರಭಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದ್ದು, ಸರ್ಕಾರ ವೀರಸೌಧ ನಿರ್ಮಿಸಿದೆ.
ಹಿನ್ನೆಲೆ: ಬ್ಯಾಡಗಿ ತಾಲೂಕು ಮೋಟೆಬೆನ್ನೂರು ಗ್ರಾಮದಲ್ಲಿ ಮೈಲಾರ ಮಹಾದೇವಪ್ಪ 1911ರ ಜೂನ್ 8 ರಂದು ಜನಿಸಿದ್ದರು. ಮಹಾತ್ಮ ಗಾಂಧೀಜಿ ನೇತೃತ್ವದ ದಂಡಿ ಉಪ್ಪಿನ ಸತ್ಯಾಗ್ರಹಕ್ಕೆ ರಾಜ್ಯದಿಂದ ಆಯ್ಕೆಯಾಗಿದ್ದ ಏಕೈಕ ವ್ಯಕ್ತಿಯೇ ಮಹಾದೇವಪ್ಪ.
ವಿವಿಧ ಅಸಹಕಾರ ಚಳವಳಿಯಲ್ಲಿ ಭಾಗಿ:ಮಹದೇವ ಹುಟ್ಟೂರಿಗೆ ಬಂದ ನಂತರ ಬ್ರಿಟಿಷರಿಗೆ ಸಿಂಹಸ್ವಪ್ನದಂತೆ ಕಾಡಿದರು. ಅಂದಿನ ಸರ್ಕಾರಗಳ ಟಪಾಲ್ ಕಳ್ಳತನ ಸೇರಿದಂತೆ ವಿವಿಧ ಅಸಹಕಾರ ಚಳವಳಿಯಲ್ಲಿ ಇವರು ಪಾಲ್ಗೊಂಡಿದ್ದರು. 1943ರ ಏಪ್ರಿಲ್ 1 ರಂದು ಹೊಸರಿತ್ತಿ ವೀರಭದ್ರೇಶ್ವರ ದೇವಸ್ಥಾನದಲ್ಲಿನ ತೆರಿಗೆ ಹಣಕ್ಕೆ ಮುತ್ತಿಗೆ ಹಾಕಿದಾಗ ಬ್ರಿಟಿಷರ ಗುಂಡೇಟಿಗೆ ಇವರು ವೀರ ಮರಣವನ್ನಪ್ಪುತ್ತಾರೆ. ಇವರ ಜೊತೆ ತಿರಕಪ್ಪ ಮಡಿವಾಳರ ಮತ್ತು ವೀರಯ್ಯ ಹಿರೇಮಠ ಅವರೂ ಹುತಾತ್ಮರಾದರು.
ಉಪ್ಪಿನ ದಂಡಿ ಸತ್ಯಾಗ್ರಹದಲ್ಲಿ ಗಾಂಧೀಜಿ ಜೊತೆ ಹೆಜ್ಜೆ:ಗಾಂಧೀಜಿ ಅವರ ಉಪ್ಪಿನ ದಂಡಿ ಸತ್ಯಾಗ್ರಹದಲ್ಲಿ ಪಾಲ್ಗೊಂಡು, ನಿರಂತರ 212 ಮೈಲು ರಾಷ್ಟ್ರಪಿತನ ಜತೆ ಹೆಜ್ಜೆ ಹಾಕಿದ್ದ ಏಕೈಕ ಕನ್ನಡಿಗ ಮಹಾದೇವ ಮೈಲಾರ ಅನ್ನೋದೇ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಮಹಾತ್ಮ ಗಾಂಧೀಜಿ ಹೋರಾಟವನ್ನು ಅನುಸರಿಸಿದ್ದ ಮೈಲಾರ ಮಹಾದೇವ, ಸುಭಾಷ್‌ಚಂದ್ರ ಬೋಸ್‌ರಂತೆ ಕ್ರಾಂತಿಕಾರಿಯೂ ಹೌದು. ಅಸಹಕಾರ ಚಳವಳಿಯ ಭಾಗವಾಗಿ ರೈಲ್ವೆ ರೋಕೋ, ಟಪಾಲ್ ಕಳ್ಳತನ ಮತ್ತು ತೆರಿಗೆ ಹಣ ಕೊಳ್ಳೆ ಹೊಡೆದರು. ಆ ಮೂಲಕ ಸ್ವಾತಂತ್ರ್ಯದ ಕಿಡಿಯನ್ನು ಎಲ್ಲೆಡೆ ಹೊತ್ತಿಸಿದರು. ಇವರ ದಾರಿಯಲ್ಲೇ ನೂರಾರು ಮಂದಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.