ಹಾವೇರಿ:ರಾಣೆಬೆನ್ನೂರಿನಲ್ಲಿ ಪ್ರತಿವರ್ಷ ಸಾರ್ವಜನಿಕ ಗಣೇಶ ಸ್ಥಾಪನೆಗೆ ಹಲವು ಸಂಘಟನೆಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ವೈವಿಧ್ಯಮಯ ಗಣೇಶ ಮೂರ್ತಿಗಳ ಜೊತೆಗೆ ಪ್ರಾತ್ಯಕ್ಷಿಕೆಗಳನ್ನ ನಿರ್ಮಾಣ ಮಾಡುತ್ತವೆ. ಈ ವರ್ಷ ವಂದೆ ಭಾರತಂ ಸಂಸ್ಥೆ ಆಯೋಧ್ಯಾ ಶ್ರೀರಾಮ ಮಂದಿರ ನಿರ್ಮಿಸಿದ್ದು, ಲಕ್ಷಾಂತರ ಜನ ಇದರ ವೀಕ್ಷಣೆ ಮಾಡಿದ್ದಾರೆ. ಮೇದಾರ ಸಮುದಾಯ ನಿರ್ಮಿಸಿರುವ ಐಫೆಲ್ ಟವರ್ ಪ್ರತಿರೂಪ ಕಣ್ಮನ ಸೆಳೆಯುತ್ತಿದೆ. ಈ ಮಧ್ಯೆ ರಾಣೆಬೆನ್ನೂರಿನ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಗಣೇಶ ಸ್ಥಾಪನೆಯ ಜೊತೆಗೆ ಇಸ್ರೋ ಚಂದ್ರಯಾನದ ಪ್ರಾತ್ಯಕ್ಷಿಕೆ ವೀಕ್ಷಣೆಯ ವ್ಯವಸ್ಥೆಯನ್ನ ಭಕ್ತರಿಗೆ ಮಾಡಿಸಿದೆ. ಚಂದ್ರಯಾನ-01, 2 ಮತ್ತು 3ರ ಬಗ್ಗೆ ಭಕ್ತರಿಗೆ ಸವಿಸ್ತಾರವಾಗಿ ವಿವರಿಸುವ ಪ್ರಯತ್ನವನ್ನ ಸಂಘಟನೆ ಮಾಡಿದೆ.
ಮೊದಲು ಎಲ್ಇಡಿ ಪರದೆ ಮೇಲೆ ಚಂದ್ರಯಾನದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನಂತರ ಚಂದ್ರಯಾನ ಮೂರರ ವಿಕ್ರಮ ಮತ್ತು ರೋವರ್ ಕಣ್ಣು ಮುಂದೆ ತೆರೆದುಕೊಳ್ಳುವ ಮೂಲಕ ವೀಕ್ಷಕರು ನೇರವಾಗಿ ವಿಕ್ರಮ ಮತ್ತು ರೋವರ್ ಅನ್ನು ಲ್ಯಾಂಡಿಂಗ್ ನೋಡುವ ವ್ಯವಸ್ಥೆ ಮಾಡಲಾಗಿದೆ. ಚಂದ್ರಯಾನ 3 ಹೇಗೆಲ್ಲ ನಡೆದಿದೆ ಎನ್ನುವ ರೀತಿಯಲ್ಲಿ ಈ ಪ್ರಾತ್ಯಕ್ಷಿಕೆ ಮಾಡಲಾಗಿದೆ. ಚಂದ್ರನ ದಕ್ಷಿಣ ತುದಿಯಲ್ಲಿ ನೌಕೆ ಇಳಿಸಿರುವ ಏಕೈಕ ದೇಶ ಭಾರತವಾಗಿದ್ದು, ಇದನ್ನು ಜನರಿಗೆ ಇನ್ನಷ್ಟು ಪ್ರಚಾರ ಪಡಿಸಲು ಈ ಪ್ರಾತ್ಯಕ್ಷಿಕೆ ಆಯ್ಕೆ ಮಾಡಲಾಗಿದೆ ಎಂದು ಸಂಘಟನೆಯ ಸದಸ್ಯ ಅಜಯ ಮಠ ಹೇಳಿದ್ದಾರೆ.