ಹಾವೇರಿ: ಆಟೋ ಚಾಲಕರ ನಡುವೆ ಗಲಾಟೆ ಉಂಟಾಗಿ ಓರ್ವ ಚಾಲಕನೋರ್ವನನ್ನು ಕೊಲೆಗೈದ ಘಟನೆ ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲಿ ನಡೆದಿದೆ. ವೆಂಕಟೇಶ್ ಆಡೂರು(55) ಮೃತ ಆಟೋ ಚಾಲಕ.
ಈತನ ಜೊತೆ ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಆಶೋಕ ಶೇಷಗಿರಿ ಮತ್ತು ಆತನ ಮಗ ಅಭಿಲಾಷ್ ಶೇಷಗಿರಿ ಜೊತೆ ಪಾಳಿಗೆ ಸಂಬಂಧಿಸಿದಂತೆ ಜಗಳ ಆರಂಭವಾಗಿದೆ. ಅಶೋಕ ಶೇಷಗಿರಿ ಬಳಿ ಎರಡು ಆಟೋಗಳಿದ್ದರೆ ವೆಂಕಟೇಶ್ ಬಳಿ ಒಂದು ಆಟೋ ಇದೆ. ಈ ಆಟೋಗಳು ಸರತಿಯಲ್ಲಿ ನಿಂತಿದ್ದವು. ಅದರಂತೆ ವೆಂಕಟೇಶ್ ನನ್ನ ಸರತಿ ಎಂದು ಬಾಡಿಗೆ ಹೋಗಲು ಮುಂದಾದಾಗ ಜಗಳ ನಡೆದಿದೆ ಎನ್ನಲಾಗಿದೆ.
ಈ ಸಮಯಲ್ಲಿ ಆರೋಪಿ ಅಶೋಕ ಮತ್ತು ಆತನ ಮಗ ಅಭಿಲಾಷ್ ಇಬ್ಬರೂ ವೆಂಕಟೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿದ್ದ ವೆಂಕಟೇಶ್ ಮಗ ಜಗಳ ಬಿಡಿಸಲು ಹೋದರೆ ಆತನ ಮೇಲೂ ಆರೋಪಿಗಳು ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್ನನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ನಂತರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ವೆಂಕಟೇಶ್ ಸಾವನ್ನಪ್ಪಿದ್ದಾರೆ ಎಂದು ವೆಂಕಟೇಶ್ ಸಂಬಂಧಿಕರು ತಿಳಿಸಿದ್ದಾರೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಇದನ್ನೂ ಓದಿ:ಸಂತ್ರಸ್ಥರ ಸಂತೈಸಿ 4 ದಿನಕ್ಕೆ ಸುಸ್ತಾದ ಜಿಲ್ಲಾಡಳಿತ: ಮನೆಗೆ ಹಿಂತಿರುಗಿ ಎಂದ ಅಧಿಕಾರಿಗಳು
ಅಕ್ಕಿಆಲೂರು ಸರ್ಕಾರಿ ಆಸ್ಪತ್ರೆಯಲ್ಲಿ ವೆಂಕಟೇಶ್ ಶವದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಶವ ನೀಡಲಾಯಿತು. ವೆಂಕಟೇಶ್ ಆಡೂರು ಕಳೆದ 15 ವರ್ಷಗಳಿಂದ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ತನ್ನ ಎರಡು ಮಕ್ಕಳು ಸೇರಿದಂತೆ ಕುಟುಂಬಕ್ಕೆ ಆಧಾರವಾಗಿದ್ದ. ಈ ಬಗ್ಗೆ ಮಾತನಾಡಿದ ಸಂಬಂಧಿಕರು ಆರೋಪಿಗಳನ್ನು ಬಂಧಿಸಿ ಕಠಿಣಶಿಕ್ಷೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.