ಹಾವೇರಿ: ತಾಲೂಕಿನ ಕೋಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ದೀಪಾವಳಿ ನಿಮಿತ್ತ ಕೋಳೂರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ನವೆಂಬರ್ 14ರಂದು ನಡೆದ ಸ್ಪರ್ಧೆ ವೇಳೆ ಯುವಕನೊಬ್ಬ ಬಿಟ್ಟ ಹೋರಿಯನ್ನು ಮತ್ತೊಂದು ಗುಂಪಿನ ಯುವಕ ಹಿಡಿದಿರುವುದೇ ಗಲಾಟೆಗೆ ಕಾರಣವಾಗಿದೆ. ಯುವಕ ಕುಮಾರ್ ಹೋರಿ ಹಿಡಿದಿದ್ದರಿಂದ ಆಕ್ರೋಶಗೊಂಡ ಮತ್ತೋರ್ವ ಯುವಕ, ನ.16 ರಂದು ತನ್ನ ಸ್ನೇಹಿತರನ್ನು ಕರೆದುಕೊಂಡು ಬಂದು ಮನಬಂದಂತೆ ಥಳಿಸಿದ್ದರು.
ದೊಣ್ಣೆ ಸೇರಿದಂತೆ ಮಾರಕ ಆಯುಧಗಳಿಂದ ಕುಮಾರ್ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ದೂರಲಾಗಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಯುವಕ ಕುಮಾರ್ನನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ಬೆನ್ನಲ್ಲೇ ಆರೋಪಿತ ಯುವಕರು ಕೋಳೂರು ಗ್ರಾಮ ತೊರೆದಿದ್ದಾರೆ ಎಂದು ತಿಳುದುಬಂದಿದೆ. ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಯುವಕನ ಕಡೆಯವರು ದೂರು ದಾಖಲಿಸಿದ್ದಾರೆ.