ಹಾವೇರಿ:ಜನವರಿ 22ರಂದುಉತ್ತರ ಪ್ರದೇಶದ ಆಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯಾಗಲಿದೆ. ಈ ಹಿನ್ನೆಲೆಯಲ್ಲಿ ದೇಶದಲ್ಲಿರುವ ಇತರೆ ರಾಮಮಂದಿರಗಳಲ್ಲೂ ವಿಶೇಷ ಪೂಜೆ-ಪುನಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪತ್ನಿ ಸೀತೆಯನ್ನರಿಸಿ ಲಂಕಾಕ್ಕೆ ತೆರಳುವ ಮುನ್ನ ಶ್ರೀರಾಮನ ಪಾದ ಸ್ಪರ್ಶಿಸಿದ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಮಂದಿರಗಳಲ್ಲಿ ಜನರು ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದಾರೆ. ಈ ನಡುವೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಬೇಕರಿ ಸಿಬ್ಬಂದಿಯೊಬ್ಬರು ಕೇಕ್‌ನಲ್ಲಿ ಶ್ರೀರಾಮಂದಿರದ ಪ್ರತಿಕೃತಿ ರಚಿಸಿ ಗಮನ ಸೆಳೆದಿದ್ದಾರೆ.
ರಾಣೆಬೆನ್ನೂರು ನಗರದ ಪ್ರವಾಸಿಮಂದಿರದ ವೃತ್ತದಲ್ಲಿರುವ ಬೇಕರಿ ಸಿಬ್ಬಂದಿ ಮಹಾಂತೇಶ್.ಟಿ ಇದರ ನಿರ್ಮಾತೃ. ಇವರು ಈ ವಿಶಿಷ್ಟ ಕೇಕ್ ಅನ್ನು ಸುಮಾರು 5 ದಿನ ತೆಗೆದುಕೊಂಡು ತಯಾರಿಸಿದ್ದಾರೆ. ಅಂದಾಜು 20 ಕೆ.ಜಿ ಸಕ್ಕರೆಯ ಪೇಸ್ಟ್ ಅನ್ನು ಕೇಕ್‌ಗೆ ಬಳಸಲಾಗಿದೆ. ಇವರು ಕಳೆದ 15 ವರ್ಷಗಳಿಂದ ಕೇಕ್ ತಯಾರಿಕೆಯಲ್ಲಿ ತೊಡಗಿದ್ದಾರೆ. ಆದರೆ ಇಂಥ ಕೇಕ್‌ಗೆ ಸಾಕಷ್ಟು ನೈಪುಣ್ಯತೆ, ಸಹನೆ ಬೇಕು ಎನ್ನುತ್ತಾರೆ ಮಹಾಂತೇಶ್. ಇದಕ್ಕಾಗಿ ಸುಮಾರು 40 ಸಾವಿರ ರೂಪಾಯಿ ವ್ಯಯಿಸಿದ್ದಾರಂತೆ.
ಆಯೋಧ್ಯೆ ಶ್ರೀರಾಮ ಮಂದಿರ ನೋಡಲು ಜನವರಿ 22ರವರೆಗೆ ಕಷ್ಟಸಾಧ್ಯ. ಆದರೆ ಕೇಕ್‌ನಲ್ಲಿ ಅರಳಿಸಿರುವ ಈ ಕಲಾಕೃತಿ ಆಯೋಧ್ಯೆ ಮಂದಿರವನ್ನೇ ಕಣ್ಣ ಮುಂದೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಓರ್ವ ರಾಮಭಕ್ತರು. ಈ ಕಲಾಕೃತಿ ಶ್ರೀರಾಮ ಮಂದಿರ ಉದ್ಘಾಟನೆಯವರೆಗೆ ಸಾರ್ವಜನಿಕರ ದರ್ಶನಕ್ಕೆ ಸಿಗಲಿದೆ. ರಾಮನ ಭಕ್ತರೂ ಆಗಿರುವ ಮಹಾಂತೇಶ್ ಮುಂದಿನ ದಿನಗಳಲ್ಲಿ ಆಯೋಧ್ಯೆಗೆ ತೆರಳಿ ಮಂದಿರ ಕಣ್ತುಂಬಿಕೊಳ್ಳುವುದಾಗಿಯೂ ತಿಳಿಸಿದರು.