ಕರ್ನಾಟಕ

karnataka

ETV Bharat / state

ಹಾವೇರಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕಲಾವಿದರಿಗೆ ಇನ್ನೂ ಸಿಕ್ಕಿಲ್ಲ ಗೌರವಧನ.. ಸ್ಮರಣ ಸಂಚಿಕೆ ಮರೀಚಿಕೆ - ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ

ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ ಮುಗಿದು ಏಳು ತಿಂಗಳಾದರೂ ಇನ್ನೂ ಸ್ಮರಣಸಂಚಿಕೆ ಬಿಡುಗಡೆಯಾಗಿಲ್ಲ.

ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ
ಹಾವೇರಿಯಲ್ಲಿ ಸಾಹಿತ್ಯ ಸಮ್ಮೇಳನ

By

Published : Jul 23, 2023, 11:07 PM IST

ಕಲಾವಿದ ಷಹಜಹಾನ್ ಮುದಕವಿ

ಹಾವೇರಿ: ಜಿಲ್ಲಾಕೇಂದ್ರ ಹಾವೇರಿಯಲ್ಲಿ ಜನವರಿ 6 ರಿಂದ ಮೂರು ದಿನಗಳ ಕಾಲ ಅಖಿಲ ಭಾರತ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿತ್ತು. ಕೊರೊನಾ ಸೇರಿದಂತೆ ವಿವಿಧ ಕಾರಣಗಳಿಂದ ಮುಂದೂಡಲಾಗುತ್ತಿದ್ದ ಸಮ್ಮೇಳನ ಕೊನೆಗೊ ಅಚ್ಚುಕಟ್ಟಾಗಿ ನಡೆದಿತ್ತು. ಆ ಮೂಲಕ ಹಾವೇರಿಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲದೆ ಸಮ್ಮೇಳನಕ್ಕೆ ಸಾಕಷ್ಟು ತೊಂದರೆಯಾಗುತ್ತದೆ ಎಂಬ ಆರೋಪಕ್ಕೆ ಸಹ ತಕ್ಕ ಉತ್ತರ ಸಿಕ್ಕಿತ್ತು. ಪ್ರಥಮ ಬಾರಿಗೆ ಹಾವೇರಿ ನಗರ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಆತಿಥ್ಯ ವಹಿಸುವ ಮೂಲಕ ಅಚ್ಚುಕಟ್ಟಾಗಿ ಸಮ್ಮೇಳನ ನಡೆದಿತ್ತು.

ಈ ಸಮ್ಮೇಳನ ಹಲವು ಪ್ರಥಮಗಳಿಗೆ ಕಾರಣವಾಗಿತ್ತು. ಪ್ರಥಮ ಬಾರಿಗೆ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಾಂತ ಕನ್ನಡ ತಾಯಿ ಭುವನೇಶ್ವರಿ ದೇವಿಯ ಜ್ಯೋತಿ ಯಾತ್ರೆ ನಡೆಸಲಾಗಿತ್ತು. ಇನ್ನು ಇದೇ ಪ್ರಥಮ ಬಾರಿಗೆ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಿಗೆ ಪ್ರತ್ಯೇಕವಾದ ಸಾರೋಟ ನಿರ್ಮಿಸಲಾಗಿತ್ತು. ಸಾಹಿತ್ಯ ಸಮ್ಮೇಳನದ ಮಹತ್ವ ಸಾರುವ ನಾಡದೇವಿ ಭುವನೇಶ್ವರಿ ದೇವಿಯ ಜ್ಯೋತಿಯಾತ್ರೆಯನ್ನ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿರುವ ಭುವನೇಶ್ವರಿಯ ದೇವಸ್ಥಾನದಲ್ಲಿ ಉದ್ಘಾಟಿಸಲಾಗಿತ್ತು.

ಈ ನಾಡದೇವಿ ಜ್ಯೋತಿಯಾತ್ರೆ ಸಮ್ಮೇಳನದ ಆರಂಭಕ್ಕೆ ಮುನ್ನ ರಾಜ್ಯದ ಬಹುತೇಕ ಜಿಲ್ಲೆ ತಾಲೂಕುಗಳಲ್ಲಿ ಸಂಚರಿಸಿತ್ತು. ಇದಕ್ಕಾಗಿ ಒಂದು ತಿಂಗಳು ಮುಂಚೆ ವಿಶೇಷವಾಗಿ ರಥ ತಯಾರಿಸಲಾಗಿತ್ತು. ಇನ್ನು ಸಮ್ಮೇಳನದ ದಿನ ಅಧ್ಯಕ್ಷ ಪ್ರೋ ದೊಡ್ಡರಂಗೇಗೌಡರನ್ನ ವಿಶೇಷವಾಗಿ ಸಾರೋಟಿನಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಲಾಗಿತ್ತು. ಈ ವಾಹನವನ್ನ ಸಹ ಆಕರ್ಷಣೀಯವಾಗಿ ತಯಾರಿಸಲಾಗಿತ್ತು. ಇನ್ನು ಸಮ್ಮೇಳನದ ಮಹಾದ್ವಾರ, ದ್ವಾರ ಆಕರ್ಷಣೀಯ ಪ್ರಧಾನ ವೇದಿಕೆ ಸಮಾನಾಂತರ ವೇದಿಕೆಗಳ ನಿರ್ಮಾಣಕ್ಕೆ ಮನಸೆಳೆಯುವಂತೆ ನಿರ್ಮಿಸಲಾಗಿತ್ತು.

ಕಲಾವಿದರಿಗೆ ಇದುವರೆಗೂ ಹಣ ನೀಡಿಲ್ಲ:ಈ ಎಲ್ಲ ಕಾರ್ಯಗಳನ್ನು ಸುಮಾರು 50 ಕಲಾವಿದರು ಹಗಲು ರಾತ್ರಿಯನ್ನದೆ ಕೆಲಸ ಮಾಡಿ ನಿರ್ಮಿಸಿದ್ದರು. ಇವೆಲ್ಲಗಳಿಗಾಗಿ ಸುಮಾರು 40 ಲಕ್ಷ ರೂಪಾಯಿ ಬಜೆಟ್ ಯೋಜಿಸಲಾಗಿತ್ತು. ಆದರೆ ಇಷ್ಟೆಲ್ಲಾ ಅಚ್ಚುಕಟ್ಟುತನಕ್ಕೆ ಕಾರಣವಾಗಿದ್ದ ಈ ಕೆಲಸ ಮಾಡಿದ ಕಲಾವಿದರಿಗೆ ಇದುವರೆಗೂ ಹಣ ನೀಡಿಲ್ಲ. ಸಮ್ಮೇಳನ ನಡೆದು ಆರು ತಿಂಗಳು 17 ದಿನಗಳಾದರೂ ಸಹ ಈ ಕಲಾವಿದರಿಗೆ ಗೌರವಧನ ಸಿಕ್ಕಿಲ್ಲ. ಇದರಿಂದ ಕೆಲಸ ಗುತ್ತಿಗೆ ಹಿಡಿದ ಕಲಾವಿದರಿಂದ ಹಿಡಿದು ಸಮ್ಮೇಳನ ಸೌಂದರ್ಯಕ್ಕಾಗಿ ದುಡಿದ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಕಾರ್ಯಗಳನ್ನ ಗುತ್ತಿಗೆ ಹಿಡಿದಿದ್ದ ಗುತ್ತಿಗೆದಾರರು ಸಾಲಗಾರರಾಗಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಹ ಕಲಾವಿದರು ಸಾಕಷ್ಟು ಸಂಕಷ್ಟದಲ್ಲಿದ್ದು, ಜಿಲ್ಲಾಡಳಿತ ಈ ಕೂಡಲೇ ಗೌರವಧನ ಬಿಡುಗಡೆ ಮಾಡುವಂತೆ ಕಲಾವಿದರು ಮನವಿ ಮಾಡಿದ್ದಾರೆ. ಸಾಹಿತ್ಯ ಸಮ್ಮೇಳನ ಯಶಸ್ವಿಗೆ ದುಡಿದ ಈ ಜೀವಗಳಿಗೆ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಿ ನೆರವಾಗಬೇಕಿದೆ. ಕಲಾವಿದರದು ಈ ಕಥೆಯಾದರೆ, ಇನ್ನು ಸ್ಮರಣ ಸಂಚಿಕೆಯದು ಇನ್ನೊಂದು ಕಥೆ.

ಸ್ಮರಣ ಸಂಚಿಕೆಯನ್ನ ಸಹ ಬಿಡುಗಡೆ ಮಾಡಬೇಕು:ಸಾಹಿತ್ಯ ಸಮ್ಮೇಳನ ನಡೆದು ಆರು ತಿಂಗಳವರೆಗೆ ಸ್ಮರಣಸಂಚಿಕೆ ನಿರ್ಮಾಣವಾಗಬೇಕು ಎನ್ನುವ ಅಣತಿಯಿದೆ. ಆದರೆ ಹಾವೇರಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನ ಮುಗಿದು ಏಳು ತಿಂಗಳಾದರೂ ಸ್ಮರಣಸಂಚಿಕೆ ಬಿಡುಗಡೆಯಾಗಿಲ್ಲ. ಈ ಕುರಿತಂತೆ ಕಸಾಪ ಜಿಲ್ಲಾಧ್ಯಕ್ಷರಿಗೆ ಕರೆ ಮಾಡಿದರೇ ಸ್ವಲ್ಪ ಕೆಲಸ ಬಾಕಿ ಇದೆ ಮಾಡುತ್ತೇವೆ ಎನ್ನುತ್ತಾರೆ. ಸಂಪಾದಕರು ಒಂದು ರೀತಿ, ಪದಾಧಿಕಾರಿಗಳು ಒಂದು ರೀತಿ ಉತ್ತರ ನೀಡುತ್ತಿದ್ದಾರೆ. ಸಮ್ಮೇಳನ ಯಶಸ್ವಿಯಾಗಿ ನಡೆಸಿಕೊಟ್ಟರಷ್ಟೇ ಸಾಲದು. ಅದರ ಜೊತೆಗೆ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದ 86 ಪುಸ್ತಕ ಮತ್ತು ಸ್ಮರಣ ಸಂಚಿಕೆಯನ್ನ ಸಹ ಬಿಡುಗಡೆ ಮಾಡಬೇಕು ಎಂದು ಸಾಹಿತಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ರಾಜ್ಯಾದ್ಯಂತ ವ್ಯಾಪಕ ಮಳೆ.. ತುಂಗಭದ್ರಾ ಜಲಾಶಯಕ್ಕೆ ಹರಿದು ಬಂದ 18 ಟಿಎಂಸಿ ನೀರು, ರೈತರಿಗೆ ಸಂತಸ

ABOUT THE AUTHOR

...view details