ಹಾವೇರಿ: ಜಿಲ್ಲೆಯ ಇಂದಿರಾ ಕ್ಯಾಂಟೀನ್ ಬಿಲ್ ಹಣ ಪಾವತಿಸಲು ಅಧಿಕಾರಿಗಳು ಕಮಿಷನ್ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ರಾಣೆಬೆನ್ನೂರು ಮತ್ತು ಹಿರೇಕೆರೂರ ಪಟ್ಟಣದಲ್ಲಿ ಮೂರು ಕ್ಯಾಂಟೀನ್‌ಗಳನ್ನು ಯಾದಗಿರಿ ಜಿಲ್ಲೆಯವರಾದ ಗುತ್ತಿಗೆದಾರ ವಿಶ್ವನಾಥ್ ರೆಡ್ಡಿ ದರ್ಶನಾಪುರ ನಡೆಸುತ್ತಿದ್ದಾರೆ. ಈ ಮೂರು ಕ್ಯಾಂಟೀನ್‌ಗಳಿಂದ ಕಳೆದ ಒಂದು ವರ್ಷದ ಒಟ್ಟು 35 ಲಕ್ಷ ರೂಪಾಯಿ ಬಿಲ್ ಹಣ ಬಿಡುಗಡೆಯಾಗಬೇಕು. ಆದರೆ ಈ ರೀತಿ ಬಿಲ್ ಕೇಳಲು ಹೋದರೆ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಮಿಷನ್ ನೀಡುವಂತೆ ಕಿರುಕುಳ: ರಾಣೆಬೆನ್ನೂರು ನಗರಸಭೆ ಮತ್ತು ಹಿರೇಕೆರೂರು ಪ.ಪಂ ಅಧಿಕಾರಿಗಳು ತಮಗೆ ಕಿರಕುಳ ನೀಡುತ್ತಿದ್ದು, ಬಿಲ್ ಹಣ ಬಿಡುಗಡೆಗೆ ಕಮಿಷನ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ ಎಂದು ವಿಶ್ವನಾಥ್ ರೆಡ್ಡಿ ದೂರಿದ್ದಾರೆ.
ಗುತ್ತಿಗೆದಾರ ರೆಡ್ಡಿ ಯಾದಗಿರಿ ಜಿಲ್ಲೆಯ ಶಹಾಪುರದ ನಿರ್ಮಲಾದೇವಿ ಮಹಿಳಾ ಮಂಡಳದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾನು ಐದು ಲಕ್ಷ ರೂಪಾಯಿ ಠೇವಣಿ ಇಟ್ಟಿದ್ದೇನೆ. ರಾಣೆಬೆನ್ನೂರ ಕ್ಯಾಂಟೀನ್ಗೆ 2 ಲಕ್ಷ ರೂ ಖರ್ಚು ಮಾಡಿ ಕೆಲ ಅಗತ್ಯ ವಸ್ತುಗಳನ್ನು ತರಿಸಿದ್ದೇನೆ. ಎಲ್ಲ ಹಣವನ್ನೂ ಕೈಯಿಂದ ಖರ್ಚು ಮಾಡಿ ಉದ್ಘಾಟನೆ ಮಾಡಿಸಿದ್ದೇನೆ. ಈವರೆಗೆ ಸರ್ಕಾರದಿಂದ ನನಗೆ ಒಂದು ರೂಪಾಯಿಯೂ ಬಂದಿಲ್ಲ. ಎರಡು ತಿಂಗಳಿಂದ ಕ್ಯಾಂಟೀನ್ ಸಿಬ್ಬಂದಿಗೆ ಸಂಬಳವನ್ನೂ ನೀಡಿಲ್ಲ. ಇದರಿಂದಾಗಿ ಕ್ಯಾಂಟೀನ್ಗಳು ಆಗಾಗ ಬಂದ್ ಆಗುತ್ತಿವೆ ಎಂದು ತಿಳಿಸಿದ್ದಾರೆ.