ಹಾವೇರಿ: ಗ್ರಾಹಕರಿಗೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬ್ಯಾಂಕ್‌ನಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಅಸಿಸ್ಟೆಂಟ್ ಮ್ಯಾನೇಜರ್ನನ್ನು ಬಂಧಿಸಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ಹಾವೇರಿ ತಾಲೂಕು ಕುರುಬಗೊಂಡ ಗ್ರಾಮದಲ್ಲಿನ ಖಾಸಗಿ ಬ್ಯಾಂಕ್‌ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸಿದ್ದ ಅರ್ಚನಾ ಬೇಟಗೇರಿ ಬಂಧನವಾಗಿರುವ ಮಹಿಳೆ. ಈ ಮಹಿಳೆ ಬ್ಯಾಂಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಸುಮಾರು ಒಂದು ಕೋಟಿ 62 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಬ್ಯಾಂಕ್‌ನಲ್ಲಿ ಇಡಲಾಗಿದ್ದ ಎಫ್ಡಿ, ಗ್ರಾಹಕರ ವಿವಿಧ ಖಾತೆ ಮತ್ತು ಚಿನ್ನದ ಲೋನ್ಗಳಲ್ಲೂ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್ ಅರ್ಚನಾ ಜೊತೆಗೆ ಬ್ಯಾಂಕ್‌ನ ಇನ್ನೂ ಇಬ್ಬರು ಸಿಬ್ಬಂದಿ ಶಾಂತಪ್ಪ ಮತ್ತು ಪ್ರವೀಣ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ. ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಅರ್ಚನಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಬ್ಯಾಂಕ್‌ನ ಪ್ರಸ್ತುತ ಮ್ಯಾನೇಜರ್ ರವಿರಾಜ್ ನೀಡಿದ ದೂರಿನ ಮೇಲೆ ಹಾವೇರಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಸಿಬ್ಬಂದಿ, ಆರೋಪಿಯನ್ನು ಬಂಧಿಸಿದ್ದು ತನಿಖೆ ಮುಂದುವರೆಸಿದ್ದಾರೆ.