ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ಹಾವೇರಿ : ಉಸಿರುಗಟ್ಟುವ ವಾತಾವರಣ ಇತ್ತು, ಅದ್ಕೆ ಪಕ್ಷ ಬಿಟ್ಟೆ ಅಂತಾರೆ. ಆದರೆ ಅವರು ಅದೇ ಪಕ್ಷದಲ್ಲಿ ಉಸಿರಾಡಿರ್ತಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದರು. ಹಾವೇರಿ ಜಿಲ್ಲೆ ಹಿರೇಕೆರೂರರಲ್ಲಿ ಇಂದು ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ನಿರಾಕರಿಸಿದ್ದು, ಲಿಂಗಾಯತ ಸಮಾಜಕ್ಕೆ ಹೊಡೆತ ಅಲ್ಲ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಅವರಿಗೆ ಸಿಎಂ ಸ್ಥಾನವನ್ನೂ ಕೊಡಲಾಗಿತ್ತು. ಕೇಂದ್ರದಲ್ಲಿ ಮಂತ್ರಿ ಮಾಡ್ತೀವಿ ಅಂದಿದ್ರು. ನಮ್ಮ ನಾಯಕರಾದ ಧರ್ಮೇಂದ್ರ ಪ್ರಧಾನ್ ಸೇರಿದಂತೆ ಎಲ್ಲರೂ ಶೆಟ್ಟರ್ ಅವರನ್ನು ಭೇಟಿಯಾಗಿ ಮಾತಾಡಿದ್ದರು. ಅವರನ್ನು ಪಕ್ಷದಲ್ಲಿ ಕಡೆಗಣಿಸಿರಲಿಲ್ಲ. ಹೊಸ ಮುಖಗಳಿಗೆ ಟಿಕೆಟ್ ಕೊಡಲಾಗಿದೆ ಎಂದು ಪಾಟೀಲ್ ಹೇಳಿದರು.
ಬಿ.ಎಸ್.ಯಡಿಯೂರಪ್ಪ ಬೆಂಗಳೂರಿನಲ್ಲಿ ಬುಧವಾರ ಮೀಟಿಂಗ್ ಕರೆದಿದ್ದಾರೆ. ಕಾವೇರಿ ನಿವಾಸದಲ್ಲಿ ವೀರಶೈವ ಲಿಂಗಾಯತ ನಾಯಕರ ಮೀಟಿಂಗ್ ಇದೆ. ನನಗೂ ದೂರವಾಣಿ ಕರೆ ಬಂದಿದೆ. ನಾಳೆ ಬೆಂಗಳೂರಿಗೆ ಹೋಗ್ತೇನೆ ಎಂದರು.
ಇಂದು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಿದೆ. ಹಿರೇಕೆರೂರು ದೇವತೆ ದುರ್ಗಾದೇವಿ ಪಾದಕ್ಕೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ್ದೇನೆ. ನಮ್ಮ ತಂದೆ-ತಾಯಿ ಸಮಾಧಿಗೂ ಪೂಜೆ ಸಲ್ಲಿಸಿದ್ದೇನೆ. ಶಂಕರ್ ರಾವ್ ವೃತ್ತದಿಂದ ರೋಡ್ ಶೋ ನಡೆಸಿ ನಂತರ ನಾಮಪತ್ರ ಸಲ್ಲಿಸುವುದಾಗಿ ಸಚಿವರು ತಿಳಿಸಿದರು.
ಪಕ್ಷದ ವರಿಷ್ಠರು ಹಿರಿಯರಿಗೆ ಟಿಕೆಟ್ ನೀಡಿಲ್ಲ ಎಂದರೆ ಅದರ ಹಿಂದೆ ಸದುದ್ದೇಶ ಇದೆ. ಪಕ್ಷದ ಭವಿಷ್ಯದ ದೃಷ್ಠಿಯಿಂದ ನಿರ್ಣಯ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರಲ್ಲಿ ಬಿ.ಸಿ.ಪಾಟೀಲ್ ಜೊತೆ ರೋಡ್ ಶೋದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ 'ಶೆಟ್ಟರ್ ನಿರ್ಧಾರ ತಪ್ಪೆಂದು ಮುಂದೆ ಗೊತ್ತಾಗಲಿದೆ':ಪಕ್ಷದಲ್ಲಿ ಒಂದು ನಾಯಕತ್ವ ಸೃಷ್ಟಿಯಾಗಬೇಕು. ಯುವಕರಿಗೆ ಹೆಚ್ಚು ಅವಕಾಶ ಕಲ್ಪಿಸುವ ದೂರದೃಷ್ಠಿ ಇಟ್ಟುಕೊಂಡು ಈ ರೀತಿಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಎಂದು ವಿಜಯೇಂದ್ರ ತಿಳಿಸಿದರು. ಇದು ಪಕ್ಷದ ಬೆಳವಣಿಗೆಗೆ ಪೂರಕ ಕ್ರಮ. ಜಗದೀಶ್ ಶೆಟ್ಟರ್ ತೆಗೆದುಕೊಂಡ ನಿರ್ಧಾರ ತಪ್ಪು ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.
ಭಾರತೀಯ ಜನತಾ ಪಕ್ಷ ದೊಡ್ಡ ಆಲದಮರ. ಜಗತ್ತಿನಲ್ಲಿ ಅತಿದೊಡ್ಡ ಪಕ್ಷ ಎಂಬ ಹೆಗ್ಗಳಿಕೆ ಬಿಜೆಪಿಗಿದೆ. ಮುಳುಗಿ ಹೋಗುತ್ತಿರುವ ಹಡಗು ಕಾಂಗ್ರೆಸ್ ಪಕ್ಷ. ಅದನ್ನ ಸೇರುವುದು ಅವರಿಗೆ ಬಿಟ್ಟ ವಿಚಾರ. ಶೆಟ್ಟರ್ಗೆ ಬರುವ ದಿನಗಳಲ್ಲಿ ಅದರ ಪರಿಣಾಮ ಏನಾಗಲಿದೆ ಎಂಬುದು ಗೊತ್ತಾಗಲಿದೆ ಎಂದು ತಿಳಿಸಿದರು.
ಇದನ್ನೂ ಓದಿ :ಶೆಟ್ಟರ್ ನನ್ನ ಗುರುಗಳು, ನನಗೆ ನಿಷ್ಟಾವಂತ ಕಾರ್ಯಕರ್ತ ಎಂಬ ಕಾರಣಕ್ಕೆ ಟಿಕೆಟ್ ಸಿಕ್ಕಿದೆ: ಮಹೇಶ್ ಟೆಂಗಿನಕಾಯಿ